ಮೂಡುಬಿದಿರೆ : ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಶ್ಲೀಲ ವರ್ತನೆ ಆರೋಪ; ಪೊಲೀಸ್‌ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

Spread the love

ಮೂಡುಬಿದಿರೆ : ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಶ್ಲೀಲ ವರ್ತನೆ ಆರೋಪ; ಪೊಲೀಸ್‌ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಮೂಡುಬಿದಿರೆ: ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಗೆ ಪೊಲೀಸ್ ಸಿಬ್ಬಂದಿಯೊಬ್ಬ ಕರೆ ಮಾಡಿ ಅಶ್ಲೀಲ‌ವಾಗಿ ಮಾತನಾಡಿ ಕಿರುಕುಳ ನೀಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ತೋಡಾರು ಬಳಿಯ ವಿವಾಹಿತ ಮಹಿಳೆಯೊಬ್ಬರು ಕುಟುಂಬ ಸಮಸ್ಯೆಯ ಕುರಿತು ಆ.23ರಂದು‌ಮೂಡುಬಿದಿರೆ ಪೊಲೀಸ್‌ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದರು. ಈ ಬಗ್ಗೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರು ಪತಿ ಮತ್ತು ಪತ್ನಿಯನ್ನು ಠಾಣೆಗೆ ಕರೆದು ಮಾತನಾಡಿ ಪ್ರಕರಣವನ್ನು ಇತ್ಯರ್ಥಪಡಿಸಿ ಕಳುಹಿಸಿದ್ದರು.

ಈ ಮಧ್ಯೆ ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿ 2020ನೇ ಬ್ಯಾಚ್ ನ ಕೊಪ್ಪಳ ಜಿಲ್ಲೆ ನಿವಾಸಿ ಶಾಂತಪ್ಪ ಎಂಬವರು ಸಂತ್ರಸ್ತ ಮಹಿಳೆ ನೀಡಿದ್ದ ದೂರಿನ ಪ್ರತಿಯಲ್ಲಿದ್ದ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಆ.25ರಿಂದ ಸೆ.1ರ ವರೆಗೂ ನಿರಂತರ ಮೆಸೇಜ್ ಮತ್ತು ಕರೆ ಮಾಡಿ ಅಶ್ಲೀಲವಾಗಿ‌ ಮಾತನಾಡುತ್ತಾ, ತನ್ನೊಂದಿಗೆ ಬರುವಂತೆ ಕರೆಯುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯು ಸೆ.1ರಂದು ಸಂಜೆ ತನ್ನ ಸಹೋದರನೊಂದಿಗೆ ಮೂಡುಬಿದಿರೆ ಠಾಣೆಗೆ ಬಂದು ಸಿಬ್ಬಂದಿ ಶಾಂತಪ್ಪನ ವಿರುದ್ಧ ಕಾಲ್ ರೆಕಾರ್ಡ್ ಮತ್ತು ಕಾಲ್ ಲಿಸ್ಟ್ ಸಹಿತ ಸಾಕ್ಷಿ ಸಮೇತ ದೂರು ನೀಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಮಂಗಳೂರು ಉತ್ತರ ಉಪವಿಭಾಗ ಪೊಲೀಸ್ ಉಪಾಯುಕ್ತರಾದ ಶ್ರೀಕಾಂತ್ ಅವರ ಅನುಮತಿ ಪಡೆದು ಪೊಲೀಸ್ ಸಿಬ್ಬಂದಿ ಶಾಂತಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಆರೋಪಿ ಶಾಂತಪ್ಪನನ್ನು ಮಂಗಳೂರು ಪೊಲೀಸ್ ಆಯುಕ್ತರಾದ ಸುದೀರ್ ಕುಮಾರ್ ಅವರು ಅಮಾನತು ಮಾಡಿದ್ದು, ಮಂಗಳೂರು ಉತ್ತರ ಪೊಲೀಸ್ ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.


Spread the love
Subscribe
Notify of

0 Comments
Inline Feedbacks
View all comments