ಯುವಕರಿಗೆ ಉದ್ಯೋಗ ಕಲ್ಪಿಸಲು ವಿಫಲರಾದ ಶೋಭಾರನ್ನು ಕ್ಷೇತ್ರದಿಂದ ಗೋ ಬ್ಯಾಕ್ ಮಾಡಲಿದ್ದೇವೆ – ವಿಶ್ವಾಸ್ ಅಮೀನ್

Spread the love

ಉದ್ಯೋಗ ಕಲ್ಪಿಸಲು ವಿಫಲರಾದ ಶೋಭಾರನ್ನು ಕ್ಷೇತ್ರದಿಂದ ಗೋ ಬ್ಯಾಕ್ ಮಾಡಲಿದ್ದೇವೆ – ವಿಶ್ವಾಸ್ ಅಮೀನ್

ಉಡುಪಿ: ಯುವಜನರಿಗೆ ಉದ್ಯೋಗ ಕಲ್ಪಿಸಲು ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಪೂರ್ಣ ವಿಫಲರಾಗಿದ್ದು ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನತೆ ಹಾಗೂ ಯುವಜನರು ಕ್ಷೇತ್ರದಿಂದಲೇ ಗೋ ಬ್ಯಾಕ್ ಮಾಡುವುದೇ ನಮ್ಮ ಪ್ರಮುಖ ಗುರಿಯಾಗಿದ್ದು, ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಬಹುಮತದಿಂದ ಗೆಲ್ಲಿಸಲಿದ್ದೇವೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಹೇಳಿದ್ದಾರೆ.

ಹಿಂದೊಮ್ಮೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸೀಟನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿರುವುದಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು.  ಆದರೆ ನಮ್ಮದೆ ಕಾಂಗ್ರೆಸ್ ಪಕ್ಷದ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವಾಗ ಅವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಎಲ್ಲಾ ರೀತಿಯ ಶ್ರಮವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ. ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು ಹಿಂದಿನ ಬಾರಿ ಸಂಸದರಾಗಿ ಕ್ಷೇತ್ರಕ್ಕೆ ನೀಡಿದ ಸಾಧನೆ ಶೂನ್ಯ. ಕಳೆದ 5 ವರ್ಷಗಳಲ್ಲಿ ಅವರು ಕ್ಷೇತ್ರಕ್ಕೆ ನೀಡಿದ ಭೇಟಿ ಕೇವಲ 35 ಬಾರಿ, ಜನರಿಗೆ ಸಿಗದೆ ಕೇವಲ ಅಧಿಕೃತ ಕಾರ್ಯಕ್ರಮಗಳಿಗೆ ಬಂದು ಹೋಗಿರುವುದು ಬಿಟ್ಟರೆ ಬೇರೆನೂ ಇಲ್ಲ.

5 ವರ್ಷಗಳ ಕಾಲ ಸಂಸದರಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ. ಸಿ ಆರ್ ಝಡ್ ನಿಯಮಾವಳಿಯ ಪರಿಣಾಮವಾಗಿ ಜಿಲ್ಲೆಯನ್ನು ಕಾಡುತ್ತಿರುವ ಮರಳು ಸಮಸ್ಯೆಯನ್ನು ಪರಿಹರಿಸುವಲ್ಲಿ ಕೂಡ ಅವರು ನಿರ್ಲಕ್ಷ್ಯ ಭಾವನೆಯನ್ನು ತೋರಿದ್ದಾರೆ. ಹಲವಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಅಪೂರ್ಣವಾಗಿದ್ದು ಅದರ ಜೊತೆಯಲ್ಲಿ ಜಿಲ್ಲೆಯಲ್ಲಿನ ಎರಡು ಟೋಲ್ ಪ್ಲಾಜಾಗಳಿಂದ ಜಿಲ್ಲೆಯ ಜನತೆ ಹಲವು ರೀತಿಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಟೋಲಿನಲ್ಲಿ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಕೂಡ ಅದಕ್ಕೆ ಸೂಕ್ತ ಪರಿಹಾರ ಕಂಡು ಕೊಳ್ಳುವಲ್ಲಿ ಸಂಸದೆ ವಿಫಲರಾಗಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆಯವರ ಇಚ್ಛಾಶಕ್ತಿಯ ಕೊರತೆಯಿಂದ ಕಳೆದ 3 ತಿಂಗಳಿನ ಹಿಂದೆ ಮಲ್ಪೆಯಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಜನ ಮೀನುಗಾರರನ್ನು ಪತ್ತೆಹಚ್ಚುವಲ್ಲಿ ಯಾವುದೇ ರೀತಿಯ ಪ್ರಾಮಾಣಿಕ ಪ್ರಯತ್ನ ಸಂಸದೆಯವರು ಮಾಡಿಲ್ಲ. ಸುಮಾರು 50 ಸಾವಿರ ಮೀನುಗಾರರು ರಸ್ತೆಗಿಳಿದು ಪ್ರತಿಭಟನೆ ನಡೆಸಿದಾಗ ಬರಲು ಸಾಧ್ಯವಾಗದ ಕೇಂದ್ರದ ರಕ್ಷಣಾ ಸಚಿವರು ಶೋಭಾ ಕರಂದ್ಲಾಜೆಯವರು ನಾಮಪತ್ರ ಸಲ್ಲಿಸುವಾಗ ಬಂದಿದ್ದಾರೆ.  ಇದರಿಂದ ತಿಳಿಯುತ್ತದೆ ಮೀನುಗಾರರ ಬಗ್ಗೆ ಕೇಂದ್ರದ ಬಿಜೆಪಿ ಸರಕಾರ ಹಾಗೂ ಸಂಸದೆ ಎಷ್ಟು ಮಟ್ಟಿನ ಕಾಳಜಿ ಇದೆ ಎನ್ನುವುದು ಎದ್ದು ಕಾಣುತ್ತಿದೆ. ಕೇರಳ ಮತ್ತು ಗೋವಾ ರಾಜ್ಯದಲ್ಲಿ ಸಿ ಆರ್ ಝಡ್ ಕಾಯಿದೆಗೆ ವಿನಾಯತಿ ನೀಡಲು ಸಾಧ್ಯವಾಗಿದೆ ಆದರೆ ಕರ್ನಾಟಕ ಸಂಸದರ ನಿರ್ಲಕ್ಷ್ಯದ ಪರಿಣಾಮ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕುಂಠಿತವಾಗಲು ಕಾರಣರಾಗಿದ್ದಾರೆ.

ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗೆ ಮತದಾರರು ಉತ್ತಮವಾಗಿ ಬೆಂಬಲಿಸುತ್ತಿದ್ದು ಸಂಸದೆ ಶೋಭಾ ಕರಂದ್ಲಾಜೆ ತನ್ನ ಸ್ವಂತ ಬಿಜೆಪಿ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಎಂದು ಕರೆಸಿಕೊಂಡು ಮತ್ತೆ ಪುನಃ ಸ್ಪರ್ಧೆಗಿಳಿದಿರುವುದು ನಾಚಿಕೇಗೇಡು. 5 ವರ್ಷ ಕ್ಷೇತ್ರದ ಸಂಸದೆಯಾಗಿ ಯುವ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಶೋಭಾ ಕರಂದ್ಲಾಜೆ ಯುವಜನರಿಗೆ ಉದ್ಯೋಗ ಸೃಷ್ಠಿ ಮಾಡುವಲ್ಲಿ ಯಾವುದೇ ರೀತಿಯ ಸಾಧನೆ ತೋರಿಲ್ಲ ಬದಲಾಗಿ ಯುವಜನತೆಯನ್ನು ಭಾವನಾತ್ಮಕ ವಿಚಾರಗಳ ಮೂಲಕ ದಾರಿತಪ್ಪಿಸುವ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ ಬಿಜೆಪಿಗರ ಗೋ ಬ್ಯಾಕ್ ಅಭಿಯಾನವನ್ನು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಜೊತೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನತೆ ಜತೆಯಾಗಿ ಪ್ರಮೋದ್ ಅವರನ್ನು ಬೆಂಬಲಿಸುವುದರ ಮೂಲಕ ಕ್ಷೇತ್ರದಿಂದಲೇ ಶೋಭಾರನ್ನು ಗೋ ಬ್ಯಾಕ್ ಮಾಡುವ ಕೆಲಸ ಮಾಡಲಿದ್ದಾರೆ.

ಬಿಜೆಪಿ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಯಾವುದೇ ರೀತಿಯ ಹೊಸ ವಿಷಯವನ್ನು ಹೊಂದಿಲ್ಲ. 2013 ರ ಚುನಾವಣಾ ಪ್ರಣಾಳಿಕೆಯನ್ನು ಮತ್ತೊಮ್ಮೆ ನಕಲು ಮಾಡಿರುವುದು ಬಿಟ್ಟರೆ ದೇಶದ ಜನತೆಗೆ ಯಾವುದೇ ಹೊಸ ಯೋಜನೆಗಳನ್ನು ಪರಿಚಯಿಸಿಲ್ಲ. ಕಳೆದ ಹಲವು ಚುನಾವಣೆಗಳಲ್ಲಿ ಕೂಡ ರಾಮಮಂದಿರದ ವಿಚಾರವನ್ನು ಪ್ರಣಾಳಿಕೆಗೆ ಸೀಮಿತವಾಗಿಸಿದ್ದು ಬಿಟ್ಟರೆ ಇದರಲ್ಲಿ ಯಾವುದೇ ಯಶಸ್ಸನ್ನು ಕಂಡಿಲ್ಲ. ಉಡುಪಿ ಚಿಕ್ಕಮಗಳೂರಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಉತ್ಸಾಹದಿಂದ ಪ್ರಮೋದ್ ಮಧ್ವರಾಜ್ ಅವರನ್ನು ಗೆಲ್ಲಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿ ದುಡಿಯಲಿದೆ ಎಂದು ವಿಶ್ವಾಸ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love