ರಾಜ್ಯ ಸರಕಾರದ ಅನುದಾನ ವಿಚಾರದಲ್ಲಿ ಪ್ರಸಾದ್ ಕಾಂಚನ್ ಹೇಳಿಕೆ ಅವಿವೇಕತನದ ಪರಮಾವಧಿ : ಕಿರಣ್ ಕುಮಾರ್ ಬೈಲೂರು
ಉಡುಪಿ: ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗದೇ ಸ್ವಪಕ್ಷೀಯ ಶಾಸಕರೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ. ಪ್ರಸಾದ್ ಕಾಂಚನ್ ಸದಾ ಉಡುಪಿ ಶಾಸಕರನ್ನು ಟೀಕೆ ಮಾಡುತ್ತಾ ಅಪ್ರಬುದ್ಧ ಹೇಳಿಕೆ ನೀಡುತ್ತಾ ಜನರನ್ನು ದಾರಿ ತಪ್ಪಿಸಲು ಮುಂದಾಗುತ್ತಿರುವುದು ಅವಿವೇಕತನದ ಪರಮಾವಧಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸಾದ್ ಕಾಂಚನ್ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ 224 ಕ್ಷೇತ್ರಗಳಿಗೆ ಸರ್ಕಾರ ನೀಡಿರುವ ಅನುದಾನದ ಬಗ್ಗೆ ಮಾಹಿತಿ ಪಡೆಯಲಿ. ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯದ ಅಭಿವೃದ್ಧಿ ಯೋಜನೆಗೆ ಹಣ ನೀಡದ ಬಗ್ಗೆ ಕಾಂಗ್ರೆಸ್ ಶಾಸಕರಾದ ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ್, ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸುತ್ತಿದರೂ ಪ್ರಸಾದ್ ಕಾಂಚನ್ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದ ರೀತಿಯಲ್ಲಿ ಕೇವಲ ಟೀಕೆಯಲ್ಲೇ ನಿರತರಾಗಿರುವುದು ವಿಪರ್ಯಾಸವೆನಿಸಿದೆ.
ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರೇ ಇದ್ದಾರೆ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಸದಾ ಉಡುಪಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಉಡುಪಿಯ ಪಾಲಿಗೆ ಇದ್ದೂ ಇಲ್ಲದಂತಾಗಿದ್ದಾರೆ. ಕಳೆದ ಬಾರಿಯ ಪರ್ಯಾಯೋತ್ಸವಕ್ಕೆ ಘೋಷಣೆ ಮಾಡಿದ 10 ಕೋಟಿ ರೂಪಾಯಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿಯ ಅನುದಾನದ ಬಗ್ಗೆ ಉಡುಪಿ ಶಾಸಕರ ನಿರಂತರ ಮನವಿ ಕಿವುಡ ರಾಜ್ಯ ಸರ್ಕಾರಕ್ಕೆ ಇನ್ನೂ ಕೇಳುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ದಿವ್ಯ ಮೌನ ವಹಿಸಿರುವ ಪ್ರಸಾದ್ ಕಾಂಚನ್ ಪಕ್ಷದಲ್ಲಿ ತಮ್ಮ ಉಪಸ್ಥಿತಿಯನ್ನು ಚಾಲ್ತಿಯಲ್ಲಿಡಲು ಶಾಸಕರ ವಿರುದ್ಧ ಆಧಾರ ರಹಿತ ಹತಾಶ ಹೇಳಿಕೆ ನೀಡುತ್ತಿರುವುದು ಬಾಲಿಷ ವರ್ತನೆಯಾಗಿದೆ.
ಪ್ರಸಾದ್ ಕಾಂಚನ್ ಇಂತಹ ಹೇಳಿಕೆ ನೀಡುವ ಬದಲು ಉಡುಪಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಸದಾ ನಿರ್ಲಕ್ಷ್ಯ ವಹಿಸುವ ರಾಜ್ಯ ಸರ್ಕಾರ, ಅಭಿವೃದ್ಧಿ ಕಾಮಗಾರಿಗಾಗಿ ಉಡುಪಿ ಕ್ಷೇತ್ರಕ್ಕೆ ನೀಡಿರುವ ಅನುದಾನದ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗೆ ತನಗೆ ಪೈಪೋಟಿ ನೀಡಲು ಹಲವಾರು ಮುಖಂಡರು ಸಿದ್ದರಾಗಿರುವುದನ್ನು ಅರಗಿಸಿಕೊಳ್ಳಲಾಗದೆ ಪ್ರಸಾದ್ ಕಾಂಚನ್ ಅಸಹಾಯಕತೆಯಿಂದ ಚಡಪಡಿಸುತ್ತಿರುವುದು ಅವರ ಅಪ್ರಬುದ್ಧ ಹೇಳಿಕೆಯಿಂದ ಸಾಬೀತಾಗುತ್ತಿದೆ. ಪ್ರಸಾದ್ ಕಾಂಚನ್ ಸ್ವಯಂ ನೀಡಿರುವ ಭರವಸೆಗಳಿಗೆ ತನ್ನದೇ ಸರಕಾರ ಸ್ಪಂದಿಸದೇ ಪಕ್ಷದೊಳಗೆ ತನ್ನನ್ನು ನಿರ್ಲಕ್ಷಿಸುತ್ತಿರುವುದು ಅವರ ಹತಾಶೆಗೆ ಮೂಲ ಕಾರಣವಾಗಿದೆ. ಇನ್ನಾದರೂ ಕಾಂಚನ್ ಅವರು ತನ್ನ ಬಾಲಿಷ ವರ್ತನೆಯನ್ನು ತಿದ್ದಿಕೊಂಡು ಪ್ರಬುದ್ಧ ರಾಜಕಾರಣಿಯಾಗಲು ಪ್ರಯತ್ನಿಸುವುದು ಉತ್ತಮ ಎಂದು ಕಿರಣ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













