ರಾ.ಹೆದ್ದಾರಿಯಲ್ಲಿನ ಅಪಾಯಕಾರಿ ಗುಂಡಿಗಳನ್ನು ಸರಿಪಡಿಸಿ – ಯಶ್ಪಾಲ್ ಸುವರ್ಣ 

Spread the love

ರಾ.ಹೆದ್ದಾರಿಯಲ್ಲಿನ ಅಪಾಯಕಾರಿ ಗುಂಡಿಗಳನ್ನು ಸರಿಪಡಿಸಿ ಯಶ್ಪಾಲ್ ಸುವರ್ಣ 

ಉಡುಪಿ: ನಗರಸಭಾ ವ್ಯಾಪ್ತಿಯ ಮೆಸ್ಕಾಂ, ಲೋಕೋಪಯೋಗಿ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ನಗರಸಭೆ ಕಚೇರಿಯಲ್ಲಿ ಸಭೆ ನಡೆಸಿದರು.

ಮಳೆ ಗಾಳಿ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಮೂಲಕ ವಿದ್ಯುತ್ ಶೀಘ್ರ ಮರು ಸಂಪರ್ಕಕ್ಕೆ ಆದ್ಯತೆ ನೀಡಿ, ದಾರಿ ದೀಪ ನಿರ್ವಹಣೆ, ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ ಹಾಗೂ ತುರ್ತು ಸಂದರ್ಭದಲ್ಲಿ ಅಗತ್ಯ ಸಿಬ್ಬಂದಿಗಳ ನಿಯೋಜನೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಮಳೆಯಿಂದ ಹದಗೆಟ್ಟಿರುವ ಲೋಕೋಪಯೋಗಿ ಇಲಾಖೆ ಸಂಬಂಧಿತ ರಸ್ತೆಗಳನ್ನು ತುರ್ತು ರಿಪೇರಿ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ರಾಷ್ಟೀಯ ಹೆದ್ದಾರಿ 66 ಉಂಟಾಗಿರುವ ಅಪಾಯಕಾರಿ ಗುಂಡಿಗಳನ್ನು ತಕ್ಷಣ ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ಸಂತೆಕಟ್ಟೆ ಅಂಡರ್ ಪಾಸ್, ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಹಾಗೂ ಈಗಾಗಲೇ ಮಂಜೂರಾತಿಗೊಂಡಿರುವ ನೂತನ ಸರ್ವೀಸ್ ರಸ್ತೆ ಕಾಮಗಾರಿ ತಕ್ಷಣ ಪ್ರಾರಂಭ ಹಾಗೂ ರಾಷ್ಟ್ರೀಯ ಹೆದ್ದಾರಿ 169 ಎ ಕೆಳ ಪರ್ಕಳ ರಸ್ತೆ ಕಾಂಕ್ರೀಟಿಕರಣ, ಇಂದ್ರಾಳಿ ರೈಲ್ವೇ ಬ್ರಿಡ್ಜ್, ಮಲ್ಪೆ ಆದಿ ಉಡುಪಿ ಕಾಮಗಾರಿ ಆದ್ಯತೆಯ ಮೇರೆಗೆ ನಡೆಸಲು ತಿಳಿಸಿದರು.

ನಗರಸಭಾ ವ್ಯಾಪ್ತಿಯ ವಾರಾಹಿ ಯೋಜನೆಯ ಮೂಲಕ ಒಪ್ಪಂದದಂತೆ ಎಲ್ಲಾ ವಾರ್ಡ್ ಗಳಿಗೆ ಕುಡಿಯುವ ನೀರು 24 ಗಂಟೆ ನಿರಂತರ ಸರಬರಾಜಿಗೆ ಕ್ರಮ ವಹಿಸಿ, ಅನಿವಾರ್ಯ ಕಾರಣಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾದಾಗ ತಕ್ಷಣ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ ನಿರ್ಮಿಸಿರುವ ನೂತನ ವಸತಿ ಸಮುಚ್ಛಯದ ಕಾಮಗಾರಿಯ ಪ್ರಗತಿ ಹಾಗೂ ರಸ್ತೆ, ಚರಂಡಿ, ದಾರಿದೀಪ ಸಹಿತ ಮೂಲ ಸೌಕರ್ಯ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಕಲ್ಮಾಡಿ, ಪೌರಾಯುಕ್ತರಾದ  ಮಹಾಂತೇಶ್ ಹಂಗರಗಿ, ವಿವಿಧ ಇಲಾಖೆಯ ಅಧಿಕಾರಿಗಳು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments