ಶಾಸಕರ ಅಮಾನತು ಸ್ಪೀಕರ್ ಆದೇಶವೇ ಅಸಾಂವಿಧಾನಿಕ : ಯಶ್ಪಾಲ್ ಸುವರ್ಣ
ಉಡುಪಿ: ಕಳೆದ ಅಧಿವೇಶನ ಅವಧಿಯಲ್ಲಿ ಸ್ಪೀಕರ್ 18 ಮಂದಿ ಶಾಸಕರ ಅಮಾನತು ಆದೇಶವೇ ಅಸಾಂವಿಧಾನಿಕ ನಡೆಯಾಗಿದ್ದು, ಇದೀಗ ಸ್ಪೀಕರ್ ರವರು ತಮ್ಮ ಆದೇಶವನ್ನು ಹಿಂಪಡೆಯುವ ಮೂಲಕ ಶಾಸಕರಾಗಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಅವಕಾಶ ನೀಡಿದಂತಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸರಕಾರಿ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ಹಾಗೂ ಕಾಂಗ್ರೆಸ್ ಸಚಿವರು ಶಾಸಕರ ಹನಿಟ್ರ್ಯಾಪ್ ವಿಚಾರದ ಬಗ್ಗೆ ವಿಪಕ್ಷದ ಶಾಸಕರಾಗಿ ಸದನದಲ್ಲಿ ಆಡಳಿತರೂಡ ಸರಕಾರವನ್ನು ವಿರೋಧಿಸುವುದು ನಮ್ಮ ಕರ್ತವ್ಯ. ಸ್ಪೀಕರ್ ಏಕಪಕ್ಷೀಯವಾಗಿ 6 ತಿಂಗಳ ಕಾಲ ಶಾಸಕರನ್ನು ಅಮಾನತು ಮಾಡುವ ಮೂಲಕ ನಮ್ಮ ಸಂವಿಧಾನ ಬದ್ಧ ಹಕ್ಕುಗಳನ್ನು ನಿರ್ಬಂಧಿಸಿದ್ದು ದುರದೃಷ್ಟಕರ.
ಈಗಾಗಲೇ ಬಿಜೆಪಿ ಪಕ್ಷದ ವತಿಯಿಂದ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ರಾಜ್ಯದ ಘನವೆತ್ತ ರಾಜ್ಯಪಾಲರೂ ಸ್ಪೀಕರ್ ರವರಿಗೆ ಅಮಾನತು ಆದೇಶ ಹಿಂಪಡೆಯುವಂತೆ ಪತ್ರ ಬರೆದಿದ್ದರು.
ಓರ್ವ ವಿಪಕ್ಷ ಶಾಸಕನಾಗಿ ಸರ್ಕಾರದ ಜನವಿರೋಧಿ ನೀತಿ ಹಾಗೂ ಮಸೂದೆಗಳನ್ನು ನನ್ನ ಕರ್ತವ್ಯ. ಇಂತಹ ಅಮಾನತು ಆದೇಶಗಳಿಂದ ನಮ್ಮ ಹೋರಾಟವನ್ನು ಹತ್ತಿಕ್ಕಲು ಎಂದಿಗೂ ಸಾಧ್ಯವಿಲ್ಲ ಹಾಗೂ ನಮ್ಮ ಸಿದ್ಧಾಂತ ಹಾಗೂ ರಾಷ್ಟೀಯ ವಿಚಾರದಲ್ಲಿ ಎಂದಿಗೂ ರಾಜೀ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಕಟಣೆಯಲ್ಲಿ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.