ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಹಾಗೂ ಕವಿ ನಿಸಾರ್ ಅಹ್ಮದ್‌ರವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ಸಿನಿಂದ ನುಡಿ ನಮನ
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಹಿರಿಯ ರಾಜಕಾರಿಣಿ ವಿನ್ನಿಫ್ರೆಡ್ ಫೆರ್ನಾಂಡಿಸ್‌ರವರ ನಿಧನ ಕ್ಷೇತ್ರಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡ ಕುಂದಾಪುರ ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಹಾಗೂ ಕವಿ ಕೆ.ಎಸ್ ನಿಸಾರ್ ಅಹಮ್ಮದ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿಕ್ಷಕರಾಗಿ ವೃತ್ತಿ ಜೀವನ ನಡೆಸುತ್ತಿದ್ದ ಕವಿ ಕೆ.ಎಸ್. ನಿಸಾರ್ ಅಹಮದ್ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವರು ಸುಗಮ ಸಂಗೀತ ಕ್ಷೇತ್ರದಲ್ಲಿ ಅವರ ರಚನೆಯ ಗೀತೆಗಳು ಅಪಾರ ಯಶಸ್ಸನ್ನು ಪಡೆದು ಅವರಿಗೆ ಜನ ಮನ್ನಣೆಯನ್ನೂ ತಂದುಕೊಟ್ಟಿತ್ತು.
ವಿನ್ನಿಫ್ರೆಡ್‌ರವರು ರಾಜಕೀಯ ಜೀವನದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದರೆ ಕವಿ ನಿಸಾರ್ ಅಹಮದ್‌ರವರು ಹಲವಾರು ಜನಪ್ರಿಯ ಕೃತಿಗಳನ್ನು ರಚಿಸಿ ರಾಜ್ಯ ಹಾಗೂ ದೇಶದಲ್ಲಿಯೇ ತನ್ನದೇ ಛಾಪನ್ನು ಮೂಡಿಸಿದ್ದರು ಎಂದರು.
ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ, ರಾಜ್ಯ ಮುಖಂಡರಾದ ಎಂ.ಎ. ಗಫೂರ್‌ರವರು ಮಾತನಾಡುತ್ತಾ ಹಿರಿಯ ರಾಜಕಾರಿಣಿಯಾಗಿದ್ದ ವಿನ್ನಿಫ್ರೆಡ್ ಫೆರ್ನಾಂಡಿಸ್‌ರವರು ಮೊದಲಿಗೆ ಪ್ರಜಾ ಸೊಶಿಯಲಿಸ್ಟ್ ಪಕ್ಷದ ಮೂಲಕ ಕುಂದಾಪುರ ಪುರಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಎರಡು ಬಾರಿ ಶಾಸಕಿಯಾಗಿ ನಂತರದ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿಯೂ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ನೇರ ದಿಟ್ಟ ನುಡಿಯ ಪ್ರಾಮಾಣಿಕತೆಯ ರಾಜಕಾರಿಣಿಯಾಗಿ ಕುಂದಾಪುರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ವಿನ್ನಿ ಅಕ್ಕ ಎಂದೇ ಜನಜನಿತರಾಗಿದ್ದನ್ನು ನೆನಪಿಸಿಕೊಂಡರು.
ಕವನ ಸಂಕಲನಗಳು, ವೈಚಾರಿಕ ಕೃತಿಗಳು, ಮಕ್ಕಳ ಸಾಹಿತ್ಯ ಕೃತಿಗಳು, ಅನುವಾದ ಕೃತಿಗಳ ರಚನೆಯೊಂದಿಗೆ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ರಾಜ್ಯ ಹಾಗೂ ದೇಶಕ್ಕೆ ಕೀರ್ತಿಯನ್ನು ತಂದುಕೊಟ್ಟವರು ಎಂದು ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಶೆಟ್ಟಿ ಪಾಂಗಾಳ, ಕುಶಲ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಕೀರ್ತಿ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಯತೀಶ್ ಕರ್ಕೇರ, ಮಹಾಬಲ ಕುಂದರ್, ಹಬೀಬ್ ಅಲಿ, ಶ್ಯಾಮಲ ಸುಧಾಕರ್, ಶ್ರೀನಿವಾಸ ಹೆಬ್ಬಾರ್, ಉಪೇದ್ರ ಗಾಣಿಗ, ರಾಜು, ಸ್ಟ್ಯಾನ್ಲಿ, ಸುಂದರ್ , ಗಣೇಶ್, ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.













