ಸಮುದ್ರದ ನೀರನ್ನು ಶುದ್ಧೀಕರಿಸಿ, ತುಂಬೆ ಡ್ಯಾಮ್ ಎತ್ತರ ಹೆಚ್ಚಿಸಿ:- ಶಾಸಕ ಕಾಮತ್
ಬರಗಾಲದ ಬಿಸಿ ಮಂಗಳೂರಿಗೂ ತಟ್ಟುತ್ತಿದ್ದು, ಈಗಲೇ ನಗರದಲ್ಲಿ ಕುಡಿಯುವ ನೀರಿಗೆ ಅಭಾವವಿದೆ. ಮುಂದಿನ ಮಾರ್ಚ್ ಬಿಡಿ, ಇದೇ ವರ್ಷಾಂತ್ಯಕ್ಕೆ ಸಮಸ್ಯೆ ವಿಪರೀತ ಹಂತಕ್ಕೆ ಹೋಗುವ ಲಕ್ಷಣಗಳಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಆಗ್ರಹಿಸಿದರು.
ಬರ ವಿಷಯವಾಗಿ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ನಮ್ಮ ಮಂಗಳೂರು ನಗರಕ್ಕೆ ತುಂಬೆ ಡ್ಯಾಮ್ ಆಸರೆಯಾಗಿದೆ. ಸದ್ಯ ಅದರ ಎತ್ತರ ಆರು ಮೀಟರ್ ಇದ್ದು, ಅದರಲ್ಲಿ 2-3 ಮೀಟರ್ ಹೂಳೇ ತುಂಬಿರುವ ಸಾಧ್ಯತೆಯಿದೆ. ಹಾಗಾಗಿ ಡ್ಯಾಮ್ ನ ಎತ್ತರ ಹೆಚ್ಚಿಸಬೇಕು. ಇದರಿಂದ ನಗರ ಭಾಗಕ್ಕೆ ಉಪಯೋಗವಾಗುತ್ತದೆ. ಎತ್ತರ ಹೆಚ್ಚಿಸಿದಾಗ ಸುತ್ತಮುತ್ತಲಿನ ಕೆಲವು ಪ್ರದೇಶಗಳು ಮುಳುಗಡೆಯಾಗುವ ಸಂಭವವಿದ್ದು ಅವರಿಗೆ ಅಗತ್ಯ ಪರಿಹಾರ ನೀಡಬೇಕು. ಮುಂದುವರಿದು, ತುಸು ಖರ್ಚು ವೆಚ್ಚ ಹೆಚ್ಚಾದರೂ ಸಮುದ್ರದ ನೀರನ್ನು ಶುದ್ಧೀಕರಿಸಿ ಕೈಗಾರಿಕೆಗಳಿಗೆ ನೀಡುವ ಯೋಜನೆ ಪ್ರಾರಂಭಿಸಬಹುದು. ಈಗಾಗಲೇ ಎಂ ಆರ್ ಪಿ ಎಲ್ ಕಂಪೆನಿಯವರು ಪ್ರತಿ ನಿತ್ಯ 20 ಎಂ ಎಲ್ ಡಿ ನೀರನ್ನು ಇದೇ ಮಾದರಿಯಲ್ಲಿ ಉಪಯೋಗಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ನಗರ ಭಾಗದಲ್ಲಿ ಎರಡು ಪ್ಲಾಂಟ್ ಮಾಡಿದಲ್ಲಿ ಬಹಳ ಉಪಯೋಗವಾಗುತ್ತದೆ ಎಂದರು.













