ಸುಳ್ಯ: ನಿಫಿಟ್ ಸ್ಕೀಂ ಮೂಲಕ ವಂಚನೆ — ಮೂವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ

Spread the love

ಸುಳ್ಯ: ನಿಫಿಟ್ ಸ್ಕೀಂ ಮೂಲಕ ವಂಚನೆ — ಮೂವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ

ಸುಳ್ಯ: ನಿಫಿಟ್ ಸ್ಕೀಂ ಮೂಲಕ ಸಾರ್ವಜನಿಕರಿಂದ ಕೋಟಿ ಕೋಟಿ ಹಣ ಸಂಗ್ರಹಿಸಿ ವಂಚನೆ ನಡೆಸಿದ ಮೂವರಿಗೆ ನ್ಯಾಯಾಲಯ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.

2013ರಲ್ಲಿ ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿಯ ಅಂಬಡೆಡ್ಕ ಪ್ರದೇಶದ ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ರಿ) ಎಂಬ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಿ, ಅದರ ಪರವಾಗಿ ಸುಳ್ಯ ಪೇಟೆಯ ಗಾಂಧಿನಗರದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ತೆರೆಯಲಾಗಿತ್ತು. ನಂತರ ‘ಬೆನಿಫಿಟ್ ಸ್ಕೀಂ’ ಎಂಬ ಹೆಸರಿನಲ್ಲಿ ಸಾವಿರಾರು ಜನರನ್ನು ಸದಸ್ಯರನ್ನಾಗಿ ಸೇರಿಸಿಕೊಂಡು, ಏಜೆಂಟರ ಮೂಲಕ ಕೋಟ್ಯಾಂತರ ಹಣ ಸಂಗ್ರಹಿಸಲಾಗಿತ್ತು.

ಸದರಿ ಸಂಸ್ಥೆಯವರು ಸದಸ್ಯರಿಂದ ಸಂಗ್ರಹಿಸಿದ ₹3,08,62,500 (ಮೂರು ಕೋಟಿ ಎಂಟು ಲಕ್ಷ ಅರವತ್ತೆರಡು ಸಾವಿರ ಐನೂರು ರೂ.) ಹಣವನ್ನು ಮರಳಿ ನೀಡದೆ, ಯಾವುದೇ ವಸ್ತು ಅಥವಾ ಲಾಭ ನೀಡದೇ ವಂಚಿಸಿದ ಪ್ರಕರಣದ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 248/2014 ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ಬಳಿಕ ಒಟ್ಟು 8 ಆರೋಪಿಗಳ ವಿರುದ್ಧ ಪೊಲೀಸ್ ಠಾಣಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ಸುಳ್ಯ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಿ. ಮೋಹನ್ ಬಾಬು ಅವರ ಸಮಕ್ಷಮದಲ್ಲಿ ನಡೆದಿದೆ. ವಿಚಾರಣೆಯ ಅಂತ್ಯದಲ್ಲಿ ದಿನಾಂಕ 03-11-2025 ರಂದು ಆರೋಪಿಗಳ ಪೈಕಿ 2ನೇ, 4ನೇ ಮತ್ತು 5ನೇ ಆರೋಪಿಗಳ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಪ್ರತಿ ಆರೋಪಿಗೂ ₹10,000 ದಂಡ ವಿಧಿಸಲಾಯಿತು. ದಂಡ ಕಟ್ಟದಿದ್ದರೆ ಇನ್ನೂ ಆರು ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಉಳಿದ 3, 6, 7 ಮತ್ತು 8ನೇ ಆರೋಪಿಗಳ ವಿರುದ್ಧ ಅಪರಾಧ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಆರೋಪಿಯು ವಿಚಾರಣೆ ವೇಳೆ ಮರಣಹೊಂದಿರುವುದರಿಂದ ಅವರ ಮೇಲಿನ ಪ್ರಕರಣವನ್ನು ನ್ಯಾಯಾಲಯ ಸ್ಥಗಿತಗೊಳಿಸಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ರಮೇಶ್ ಅವರು ಸಮರ್ಥವಾಗಿ ವಾದ ಮಂಡಿಸಿದರು.


Spread the love
Subscribe
Notify of

0 Comments
Inline Feedbacks
View all comments