ಸೂರ್ಯ ಘರ್ ಯೋಜನೆ ಅನುಪಯುಕ್ತ ಯೋಜನೆ – ವಿಕಾಸ್ ಹೆಗ್ಡೆ
ಕುಂದಾಪುರ: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಜನರಿಗೆ ಅನಗತ್ಯ ಆರ್ಥಿಕ ಹೊರೆಯನ್ನು ಹೊರೆಸುವ ಯೋಜನೆ ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ .
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಹೆಸರಿನಲ್ಲಿ ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸಲು ಸಬ್ಸಿಡಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಕೇಂದ್ರ ಸರ್ಕಾರ ಜಾಹಿರಾತುಗಳನ್ನು ನೀಡುತ್ತಿದ್ದು ಇದೊಂದು ಅನುಪಯುಕ್ತ ಹಾಗೂ ಜನಸಾಮಾನ್ಯರನ್ನು ಆರ್ಥಿಕ ಹೊರೆಯನ್ನು ಹೇರುವ ಯೋಜನೆಯಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆಯ ಮೂಲಕ ಇನ್ನೂರು ಯೂನಿಟ್ ತನಕ ಉಚಿತ ವಿದ್ಯುತ್ ನೀಡುತ್ತಿದ್ದು ರಾಜ್ಯದ ಸುಮಾರು 80% ಕ್ಕಿಂತ ಹೆಚ್ಚಿನ ಫಲಾನುಭವಿಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಹೆಸರಿಗೆ ಮಾತ್ರ ಉಚಿತ ಆದರೆ ಸಬ್ಸಿಡಿ ಹೆಸರಿನಲ್ಲಿ ಫಲಾನುಭವಿಗಳಿಗೆ ಸಾಲ ನೀಡಿ ನಂತರ ಫಲಾನುಭವಿಗಳಿಗೆ ಅನಗತ್ಯ ಸಾಲದ ಸುಳಿಯಲ್ಲಿ ಸಿಲುಕಿಸುವ ಯೋಜನೆ ಇದಾಗಿದೆ. ಇದರೊಂದಿಗೆ ಸೋಲಾರ್ ದಾರಿದೀಪ ಇತ್ಯಾದಿ ಸೋಲಾರ್ ಉಪಕರಣಗಳು ಈಗಾಗಲೇ ಸರಿಯಾದ ನಿರ್ವಹಣೆ ಇಲ್ಲದೆ ಯೋಜನೆಗಳು ನಿರುಪಯುಕ್ತವಾಗಿರುವ ಕಾಲಘಟ್ಟದಲ್ಲಿ ಸೂರ್ಯ ಘರ್ ಸೌರ ವಿದ್ಯುತ್ ಯೋಜನೆ ಕೂಡ ಜನರಿಗೆ ಅನಗತ್ಯ ಆರ್ಥಿಕ ಹೊರೆ ನೀಡುವ ಯೋಜನೆಯಾಗಿದ್ದು ಪಂಚ ಗ್ಯಾರಂಟಿಗಳ ಮೂಲಕ ನೆಮ್ಮದಿಯ ಬದುಕನ್ನು ಕಾಣುತ್ತಿರುವ ಕರ್ನಾಟಕ ರಾಜ್ಯದಲ್ಲಿ ಅನಗತ್ಯ ಆರ್ಥಿಕ ಹೊರೆ ನೀಡುವುದು ಜನವಿರೋಧಿ ಕ್ರಮವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.