ಸೆ.15: ಉಡುಪಿಯಲ್ಲಿ ಆಲಾರೆ ಗೋವಿಂದ ತಂಡದಿಂದ ಮಡಿಕೆ ಹೊಡೆಯುವ ಪ್ರದರ್ಶನ
ಉಡುಪಿ: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುಂಬೈಯ ಅಲಾರೆ ಗೋವಿಂದ ತಂಡದ ವತಿಯಿಂದ ನಗರದಲ್ಲಿ 10 ಕಡೆ, 50 ಅಡಿ ಎತ್ತರದ ಮಡಿಕೆ ಹೊಡೆಯುವ ಪ್ರದರ್ಶನ ಆಯೋಜಿಸಲಾಗಿದೆ ಎಂದು ಶ್ರೀ ಸಾಯಿ ಲಕ್ಷ್ಮೀ ತಂಡದ ಸಹ ಸಂಯೋಜಕ ಸಂತೋಷ ಡಿ ಸುವರ್ಣ ಉದ್ಯಾವರ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಡಲ ತಡಿಯ ಪೊಡವಿಗೊಡೆಯ ಶ್ರೀ ಕೃಷ್ಣನ ನೆಲೆವಿಡಾದ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಳೆದ ಹಲವಾರು ವರ್ಷಗಳಿಂದ (2012) ಮುಂಬೈಯ ಅಲಾರೆ ಗೋವಿಂದ ತಂಡವನ್ನು ನಮ್ಮ ಊರಿನ ಶ್ರೀ ಕೃಷ್ಣ ದೇವಸ್ಥಾನದ ವಿಟ್ಲ ಪಿಂಡಿ ಸಂದರ್ಭ ಕರೆಸಿ, ಉಡುಪಿಯ ನಗರದ 10 ಕಡೆ, 50 ಅಡಿ ಎತ್ತರದ ಮಡಿಕೆ ಹೊಡೆಯುವ ಪ್ರದರ್ಶನವನ್ನು ಮಾಡುತ್ತಾ ಬಂದಿರುತ್ತೇವೆ.
ಶ್ರೀ ಸಾಯಿಲಕ್ಷ್ಮೀ ಉಡುಪಿ ಸಂಸ್ಥೆಯು ಮಧುಸೂಧನ ಪೂಜಾರಿ. ಕೆಮ್ಮಣ್ಣು ಸಂಯೋಜಕರಾಗಿ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತದೆ. ಇವರು ಮುಂಬೈಯಲ್ಲಿ ಸೂರ್ಯೋದಯ ಕ್ರೀಡಾ ಮಂಡಲ ವನ್ನು ಸ್ಥಾಪಿಸಿ ಯುವಕರ ಅಲಾರೆ ಗೋವಿಂದ ತಂಡವನ್ನು ರಚಿಸಲು ಬಹಳಷ್ಟು ಶ್ರಮ ಪಟ್ಟಿರುತ್ತಾರೆ. ಈ ಬಾರಿ ಉಡುಪಿಗೆ ಬರುವಂತ ತಂಡದ ಹೆಸರು ಬಾಲಮಿತ್ರ ವ್ಯಾಯಾಮ ಶಾಲಾ ಮುಂಬೈ, ಸಾಂತಕ್ರೂಸ್ ಪೂರ್ವ ಇದರ 200 ಜನ ಸದಸ್ಯರು, ಈ ತಂಡದಲ್ಲಿ ಉಡುಪಿಗೆ ಆಗಮಿಸಲಿದ್ದಾರೆ.
ಸೆಪ್ಟೆಂಬರ್ 15ರಂದು ಸೋಮವಾರ ಬೆಳಿಗ್ಗೆ 9:30 ಗಂಟೆಗೆ ಶ್ರೀ ಕೃಷ್ಣ ಮಠ ಕನಕ ಗೋಪುರದ ಎದುರು ತಮ್ಮ ಪ್ರದರ್ಶನವನ್ನು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಇನ್ನಿತರ ಅತಿಥಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಚಾಲನೆಯನ್ನು ನೀಡಲಿದ್ದಾರೆ.
ಬಳಿಕ 10.30 ಕ್ಕೆ ಕುಂಜಿಬೆಟ್ಟು ಏತರ್ ಶೋರೂಮ್ ಎದುರು, 11 ಗಂಟೆಗೆ ನಂದಾ ಗೋಲ್ಡ್ ಎದುರು, 11.30ಕ್ಕೆ ಸಂಸ್ಕೃತ ಕಾಲೇಜು ಸಮೀಪದ ವಿ ಕೆ ಪ್ಯಾರಡೈಸ್ ಬಳಿ, 12 ಗಂಟೆಗೆ ಡೆಂಟಾ ಕೇರ್ ಎದುರು, 12.30ಕ್ಕೆ ಮಿತ್ರ ಪ್ರಿಯ ಆಸ್ಪತ್ರೆಯ ಗಿರಿಜಾ ಸರ್ಕಲ್ ಬಳಿ, 2 ಗಂಟೆಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣ, 3 ಗಂಟೆಗೆ ಆದಿ ಉಡುಪಿ ಜಂಕ್ಷನ್, 4 ಗಂಟೆಗೆ ಮಿಷನ್ ಕಂಪೌಡ್ ಬಳಿ, ಸಂಜೆ 5 ಗಂಟೆಗೆ ಅಂಬಾಗಿಲು ಆದರ್ಶ ಬೇಕರಿ ಬಳಿ ಸಮಾರೋಪಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕರಾದ ಮಧುಸೂದನ ಪೂಜಾರಿ ಕೆಮ್ಮಣ್ಣು, ಜಯ ಪೂಜಾರಿ ಲಕ್ಷ್ಮೀನಗರ ಗರ್ಡೆ, ಸುಧಾಕರ ಕೋಟ್ಯಾನ್ ನೇಜಾರ್ ಉಪಸ್ಥಿತರಿದ್ದರು.