ಸೆ.22ರಿಂದ ಅ.3: ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವ
ಮಂಗಳೂರು: ಸೆ.22ರಂದು ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆಯೊಂದಿಗೆ ಪುಣ್ಯಾಹಹೋಮ, ನವಕಲಶಾಭಿಷೇಕ ನಡೆದು ಮಧ್ಯಾಹ್ನ 12ಕ್ಕೆ ನವದುರ್ಗೆಯರು, ಮಹಾಗಣಪತಿ, ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದೆ ಎಂದು ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿ ಖಜಾಂಚಿ ಪದ್ಮರಾಜ್ ಆರ್.ಪೂಜಾರಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೆ.22ರ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ರಾಮಕೃಷ್ಣ ಮಿಷನ್ ಅಧ್ಯಕ್ಷ ಜಿತಕಾಮಾನಂದಜಿ ಮಹರಾಜ್ ಹಾಗೂ ಬ್ರಹ್ಮಕುಮಾರೀಸ್ ಸಂಸ್ಥೆ ಮುಖ್ಯಸ್ಥೆ ವಿಶ್ವೇಶ್ವರಿ ಜೀ ಅವರಿಂದ ಜನಾರ್ದನ ಪೂಜಾರಿ ಅವರ ಸಮ್ಮುಖ ಚಾಲನೆ ಪಡೆಯಲಿವೆ.
ಸೆ.25ರಂದು ಸಂಜೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ.
ಇದೇ ಸಂದರ್ಭದಲ್ಲಿ 40 ತಂಡಗಳ 1,500ಕ್ಕೂ ಅಧಿಕ ಕಲಾವಿದರಿಗೆ ಕಲಾಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಭರತನಾಟ್ಯ, ಜಾನಪದ, ಭಕ್ತಿನೃತ್ಯ ರೂಪಕ, ಯಕ್ಷಗಾನ, ಗಾನನಾಟ್ಯವೈಭವ, ತಾಳಮದ್ದಳೆ, ಹರಿಕಥೆ, ಸಪ್ತ ವೀಣಾ ವಾದನ ಇತ್ಯಾದಿ ಪ್ರದರ್ಶನಗೊಳ್ಳಲಿವೆ. ದಸರಾ ಅಂಗವಾಗಿ 3ನೇ ವರ್ಷದ ದಸರಾ ಮ್ಯಾರಥಾನ್ 28ರಂದು ಬೆಳಗ್ಗೆ 4ರಿಂದ ನಡೆಯಲಿದೆ., 1 ಲ.ರೂ. ಬಹುಮಾನ ಇದೆ. ಸೆ.24ರಂದು ಮಕ್ಕಳಿಗಾಗಿ ಮೂರು ವಿಭಾಗದಲ್ಲಿ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆ ನಡೆಯಲಿದೆ. 26ರಂದು ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್ ರಾಜ್ಯ ಮಟ್ಟದ ದೇಹದಾಡ್ಯÌ ಸ್ಪರ್ಧೆ ಆಯೋಜಿಸಲಾಗಿದೆ. ದಸರಾ ಸಂದರ್ಭ ಪ್ರತಿದಿನ ಒಬ್ಬರಂತೆ 9 ಸಾಧಕಿಯರಿಗೆ ಅಸಾಮಾನ್ಯ ಸ್ತ್ರೀ ಪುರಸ್ಕಾರ 2025ನ್ನು ನೀಡಿ ಗೌರವಿಸಲಾಗುವುದು.
ಅ.2ರಂದು ಶೋಭಾಯಾತ್ರೆ
ಅ.2ರ ಸಂಜೆ 4ರಿಂದ ನವದುರ್ಗೆಯರು, ಗಣಪತಿ ಮತ್ತು ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಕ್ಷೇತ್ರದಿಂದ ಹೊರಟು ಕಂಬ೦ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಲಾಲ್ಬಾಗ್, ಬಲ್ಲಾಳ್ಭಾಗ್. ಪಿವಿಎಸ್ ಸರ್ಕಲ್, ನವಭಾರತ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದಿಂದ ಕಾರ್ಸ್ಟ್ರೀಟ್, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ಬರಲಿದೆ ಎಂದು ಹರಿಕೃಷ್ಣ ಬಂಟ್ವಾಳ್ ವಿವರಿಸಿದರು. ಈ ಬಾರಿ ಡಿಜೆಗೆ ಅವಕಾಶ ಇರುವುದಿಲ್ಲ ಎಂದರು.
ದೇವಸ್ಥಾನದ ಒಳಾಂಗಣದ ಮೇಲ್ಟಾವಣಿಯನ್ನು ಹೊಸಮಾದರಿಯಲ್ಲಿ ನವೀಕರಿಸಲಾಗಿದ್ದು, ಸೆ.21ರಂದು ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದಾರೆ.
ಸಮಿತಿ ಅಧ್ಯಕ್ಷ ಜೈರಾಜ್ ಎಚ್ ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ಜಗದೀಪ್ ಡಿ.ಸುವರ್ಣ, ಕೃತಿನ್ ಅಮೀನ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಡಾ| ಬಿ.ಜಿ.ಸುವರ್ಣ, ಸದಸ್ಯರಾದ ಹರೀಶ್ ಕುಮಾರ್, ರಾಧಾಕೃಷ್ಣ, ಚಂದನ್ ದಾಸ್, ಶೈಲೇಂದ್ರ ಸುವರ್ಣ, ಪಿ.ಕೆ.ಗೌರವಿ ರಾಜಶೇಖರ್, ಲತೀಶ್ ಸುವರ್ಣ ಮುಂತಾದವರಿದ್ದರು.