ರೋಹನ್ ಕಾರ್ಪೊರೇಶನ್ನ ‘ಫ್ರೀಡಂ ಪ್ಯಾಲೆಟ್ 2026’ ರ ಅಂತಿಮ ಸುತ್ತು ರೋಹನ್ ಸಿಟಿಯಲ್ಲಿ ಯಶಸ್ವಿ
ಮಂಗಳೂರು: ರೋಹನ್ ಕಾರ್ಪೊರೇಶನ್ ಆಯೋಜಿಸಿದ್ದ ಫ್ರೀಡಂ ಪ್ಯಾಲೆಟ್ 2026ರ ಅಂತಿಮ ಸುತ್ತು ಮಂಗಳೂರಿನ ಬೇಜೈಯಲ್ಲಿರುವ ರೋಹನ್ ಸಿಟಿಯಲ್ಲಿ ನಡೆಯಿತು. 16 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯ ಮೊದಲ ಸುತ್ತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 2,857 ಚಿತ್ರಗಳು ಸ್ಪರ್ಧೆಗೆ ಸಲ್ಲಿಕೆಯಾಗಿದ್ದವು. ಈ ಪೈಕಿ 60 ಮಂದಿ ಸ್ಪರ್ಧಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.

“ದಿ ಕೋಸ್ಟ್ ಇನ್ ದಿ ಸ್ಟೋರಿ ಆಫ್ ಇಂಡಿಯಾ” ಎಂಬ ವಿಷಯದೊಂದಿಗೆ ನಡೆದ ಅಂತಿಮ ಸುತ್ತಿನಲ್ಲಿ, ಭಾರತದ ಕಥೆಯಲ್ಲಿ ಕರಾವಳಿಯ ಪಾತ್ರ ಮತ್ತು ಮಹತ್ವವನ್ನು ಮಕ್ಕಳು ತಮ್ಮ ಚಿತ್ರಕಲೆಯ ಮೂಲಕ ಅನಾವರಣಗೊಳಿಸಿದರು. ಮಂಗಳೂರಿನ ಕರಾವಳಿಯ ಶ್ರೀಮಂತ ಪರಂಪರೆ, ಸಂಸ್ಕೃತಿ, ಬದುಕು ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದ ಸ್ಫೂರ್ತಿ ಪಡೆದ ಮಕ್ಕಳು, ತಮ್ಮದೇ ಆದ ಕಲ್ಪನೆ ಮತ್ತು ದೃಷ್ಟಿಕೋನದ ಮೂಲಕ ಅದನ್ನು ಭಾರತದ ವಿಶಾಲ ಕಥೆಯೊಂದಿಗೆ ಬೆಸೆದು ಚಿತ್ರಿಸಿದರು.
ಫ್ರೀಡಂ ಪ್ಯಾಲೆಟ್ 2026ರ ತೀರ್ಪುಗಾರರ ಸಹಭಾಗಿಗಳಾದ ಪಿಕ್ಸ್ನಿಲ್ ಸ್ಟುಡಿಯೋ ಸ್ಪರ್ಧಿಗಳ ಚಿತ್ರಗಳನ್ನು ಮೌಲ್ಯಮಾಪನ ಮಾಡಿತು. ವಿಷಯದ ನಿರೂಪಣೆ, ಸೃಜನಶೀಲತೆ ಹಾಗೂ ಬಣ್ಣಗಳ ಬಳಕೆಯನ್ನು ಪ್ರಮುಖ ಮಾನದಂಡಗಳಾಗಿ ಪರಿಗಣಿಸಿ ಚಿತ್ರಗಳಿಗೆ ಅಂಕಗಳನ್ನು ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಮಾರಂಭದಲ್ಲಿ ರೋಹನ್ ಕಾರ್ಪೊರೇಶನ್ನ ನಿರ್ದೇಶಕರಾದ ಡಿಯೋನ್ ಮೊಂತೆರೊ, ಸಂಸ್ಥೆಯ ಜನರಲ್ ಮ್ಯಾನೇಜರ್ ಸುಮನಾ, ಹಾಗೂ ಜ್ಯೂರಿ ಸದಸ್ಯರಾದ ಪೃಥ್ವಿರಾಜ್ ಮತ್ತು ಮೆಹಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಧಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಿಯೋನ್ ಮೊಂತೆರೊ ಅವರು, “ಫ್ರೀಡಂ ಪ್ಯಾಲೆಟ್ 2026ಕ್ಕೆ ದೊರೆತ ಭರ್ಜರಿ ಪ್ರತಿಕ್ರಿಯೆ ಹಾಗೂ ಮಕ್ಕಳ ಚಿತ್ರಗಳಲ್ಲಿ ಮೂಡಿಬಂದ ಕಲ್ಪನೆ ಮತ್ತು ಪ್ರತಿಭೆ ನಿಜಕ್ಕೂ ಸಂತೋಷ ತಂದಿದೆ. ಈ ವರ್ಷದ ವಿಷಯವು ಮಂಗಳೂರಿನ ಕರಾವಳಿಯ ವೈಶಿಷ್ಟ್ಯವನ್ನು ಅರಿತು, ಅದನ್ನು ತಮ್ಮದೇ ಆದ ದೃಷ್ಟಿಕೋನದಿಂದ ಚಿತ್ರಿಸಲು ಮಕ್ಕಳಿಗೆ ಅವಕಾಶ ನೀಡಿತು. ಅಂತಿಮ ಸುತ್ತಿನಲ್ಲಿ ಮಕ್ಕಳು ತೋರಿದ ಸೃಜನಶೀಲತೆ ಮತ್ತು ವಿಭಿನ್ನ ಕಲ್ಪನೆಗಳು ಗಮನಾರ್ಹವಾಗಿದ್ದವು,” ಎಂದರು.
ಸ್ಪರ್ಧೆಗೆ ದೊರೆತ ಪ್ರತಿಕ್ರಿಯೆಯ ಕುರಿತು ಮಾತನಾಡಿದ ರೋಹನ್ ಕಾರ್ಪೊರೇಶನ್ನ ಜನರಲ್ ಮ್ಯಾನೇಜರ್ ಸುಮನಾ ಅವರು, “ಮಕ್ಕಳು ಮತ್ತು ಅವರ ಪೋಷಕರಿಂದ ದೊರೆತ ಪ್ರತಿಕ್ರಿಯೆ ಅತ್ಯಂತ ಪ್ರೋತ್ಸಾಹದಾಯಕವಾಗಿದೆ. ಪ್ರತಿಯೊಬ್ಬ ಅಂತಿಮ ಸ್ಪರ್ಧಿಯೂ ವಿಷಯವನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು, ಅದನ್ನು ಚಿತ್ರಕಲೆಯ ಮೂಲಕ ವಿಭಿನ್ನವಾಗಿ ಅಭಿವ್ಯಕ್ತಿಸಿದ್ದಾರೆ,” ಎಂದು ಹೇಳಿದರು..
ಫ್ರೀಡಂ ಪ್ಯಾಲೆಟ್ 2026ರ ಫಲಿತಾಂಶಗಳನ್ನು ಆಗಸ್ಟ್ 15ರಂದು ಮಂಗಳೂರಿನ ಪಂಪ್ವೆಲ್ನ ರೋಹನ್ ಸ್ಕ್ವೇರ್ನಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ಪ್ರಥಮ ಬಹುಮಾನವಾಗಿ ₹25,000, ದ್ವಿತೀಯ ಬಹುಮಾನವಾಗಿ ₹15,000 ಹಾಗೂ ತೃತೀಯ ಬಹುಮಾನವಾಗಿ ₹10,000 ನಗದು ಬಹುಮಾನಗಳನ್ನು ನೀಡಲಾಗುವುದು.
ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ಫ್ರೀಡಂ ಪ್ಯಾಲೆಟ್ 2026, ಮಕ್ಕಳಲ್ಲಿನ ಕಲಾ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಜೊತೆಗೆ, ಕರಾವಳಿಯ ಬದುಕು, ಸಂಸ್ಕೃತಿ ಮತ್ತು ಭಾರತದೊಂದಿಗೆ ಅದರ ಬೆಸುಗೆಯನ್ನು ಮಕ್ಕಳ ದೃಷ್ಟಿಕೋನದಲ್ಲಿ ಅರ್ಥೈಸಿ, ಚಿತ್ರಕಲೆಯ ಮೂಲಕ ವ್ಯಕ್ತಪಡಿಸಲು ಅವಕಾಶ ನೀಡುವ ಪ್ರಯತ್ನವಾಗಿದೆ.












