ಹಿಂದುತ್ವ ಹೆಸರಿನಲ್ಲಿ ಮತಾಂತರವನ್ನು ಅಪರಾಧಿಕರಣಗೊಳಿಸುತ್ತಿರುವುದು ಭಾರತದ ತಾತ್ವಿಕ ಪರಂಪರೆಗೆ ದ್ರೋಹ – ಪ್ರೊ.ಫಣಿರಾಜ್
ಉಡುಪಿ: ಹಿಂದುತ್ವದ ಹೆಸರಿನಲ್ಲಿ ಮತಾಂತರವನ್ನು ಅಪರಾಧೀಕರಣಗೊಳಿಸುತ್ತಿದ್ದು ಇದು ಭಾರತದ ತಾತ್ವಿಕ ಪರಂಪರೆಗೆ ದ್ರೋಹ ಎಂದು ಚಿಂತಕ ಪ್ರೊಫಣಿರಾಜ್ ಅಭಿಪ್ರಾಯ ಪಟ್ಟರು
ಅವರು ಇಂದು ಉಡುಪಿಯ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ “ಛತ್ತೀಸ್ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಮೇಲೆ ಸುಳ್ಳು ಪ್ರಕರಣ” ದಾಖಲಿಸಿ ಬಂಧಿಸಿರುವ ಕ್ರಮವನ್ನು ಖಂಡಿಸಿ ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಛತ್ತೀಸ್ಗಢದಲ್ಲಿ ಕ್ರೈಸ್ತ ಭಗಿನಿಯರನ್ನು ಬಲವಂತದ ಮತಾಂತರ ಮತ್ತು ಮಾನವ ಹಕ್ಕುಗಳ ಕಳ್ಳ ಸಾಗಾಣಿಕೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ ಕಾರಣಕ್ಕೆ ಮಾತ್ರ ಈ ಪ್ರತಿಭಟನೆ ನಡೆಯುತ್ತಿಲ್ಲ ಬದಲಾಗಿ ಅವರನ್ನು ಬಂಧಿಸಿರುವ ಪ್ರಕ್ರಿಯೆಯ ವಿರುದ್ಧ ಕೂಡ ನಮ್ಮ ಆಕ್ಷೇಪ ಇದೆ ಎಂದರು.
ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಅಲ್ಪಸಂಖ್ಯಾತರ ನಿತ್ಯದ ಬದುಕನ್ನು ಅಪರಾಧೀಕರಣಗೊಳಿಸುವುದಕ್ಕಾಗಿ ತಂದಿರುವ ಕಾನೂನಾಗಿದೆ. ಮತಾಂತರ ಎನ್ನುವುದು ಸಂವಿಧಾನ ವಿರೋಧಿಯಲ್ಲ, ಅದು ಸಂವಿಧಾನ ಬದ್ದ ಹಕ್ಕು. ಪ್ರತಿಯೊಬ್ಬ ಭಾರತೀಯನಿಗೆ ಯಾವುದೇ ಧರ್ಮವನ್ನು ಆಚರಿಸುವ, ಭೋದಿಸುವ ಹಕ್ಕಿದೆ. ಹಿಂದುಗಳಂತೆ ಅಲ್ಪಸಂಖ್ಯಾತರಿಗೂ ಈ ಹಕ್ಕು ಸಂವಿಧಾನ ನೀಡುತ್ತದೆ. ಇದು ಯಾರ ಕರುಣೆ ಅಲ್ಲ ಇದು ಸಂವಿಧಾನ ನೀಡಿರುವ ಹಕ್ಕಾಗಿದೆ. ಸಂವಿಧಾನದ ವಿಧಿ 14&15 ರಂತೆ ಕಾನೂನಿನಲ್ಲಿ ಎಲ್ಲರೂ ಸಮಾನರು. ಈ ಕಾಯಿದೆ ಭಾರತದ ವಿಧಿ 14,15&25 ನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದರು.
ಈ ಘಟನೆಯು ಹಿಂದುತ್ವದ ಅಜೆಂಡಾ ಹೇರುವ ಪ್ರಯತ್ನದ ಮುಂದುವರಿದ ಭಾಗವಾಗಿದೆ.ಅವರ ಅಡಿಯಲ್ಲಿಮುಸ್ಲಿಮರು ಎರಡನೇ ದರ್ಜೆ ಪ್ರಜೆಯಾಗಿರಬೇಕು ಎಂಬ ವಾದ ಅವರದ್ದಾಗಿದೆ ಈ ನಿಲುವಿನ ವಿರುದ್ದದ ನಮ್ಮ ಪ್ರತಿಭಟನೆಯಾಗಿದೆ.ಮತಾಂತರದ ಹಕ್ಕು ನಮಗೆ ಸಂವಿಧಾನ ಕೊಟ್ಟಿದೆ. ಇದು ಯಾರೂ ಕೊಟ್ಟಿದ್ದಲ್ಲ.ಬ್ರಾಹ್ಮಣ್ಯದಿಂದ ನಾನು ಪ್ರಜಾಪ್ರಭುತ್ವವಾದಕ್ಕೆ, ಸಂವಿಧಾನಿಕ ಮೌಲ್ಯದೆಡೆಗೆ ಮತಾಂತರಗೊಂಡಿದ್ದೇನೆ ಎಂದರು.
ಕ್ರೈಸ್ತರು ಇಲ್ಲಿನ ಶೋಷಿತರಿಗೆ ಸಾಮಾಜಿಕ ಭದ್ರತೆ, ಶಿಕ್ಷಣ ನೀಡಿದಾಗ ಸ್ವ ಇಚ್ಛೆಯಿಂದ ಮತಾಂತರಗೊಂಡರು. ಅವರು ಯಾರನ್ನೂ ಬಲವಂತವಾಗಿ ಮತಾಂತರಗೊಳಿಸಿಲ್ಲ. ಹಾಗೆ ಒಂದು ವೇಳೆ ಆಗಿದ್ದರೆ ಇಲ್ಲಿ ಅವರ ಜನಸಂಖ್ಯೆ ಹೆಚ್ಚಾಗಿರಬೇಕಿತ್ತು ಎಂದು ಹೇಳಿದರು.
ನಂತರ ಮಾತನಾಡಿದ ಅಲ್ಪಸಂಖ್ಯಾತ ವೇದಿಕೆಯ ಅಧ್ಯಕ್ಷರಾದ ಚಾರ್ಲ್ಸ್ ಅಂಬ್ಲೇರ್, “ಈಗಿನ ಕೇಂದ್ರ ಸರಕಾರದಿಂದ ಅಲ್ಪಸಂಖ್ಯಾತರಿಗೆ ಸಮಸ್ಯೆಯಾಗುತ್ತಿದೆ. ಕ್ರೈಸ್ತ ಸಂಸ್ಥೆಗಳ ಮೇಲೆ ಮತಾಂತರದ ಸುಳ್ಳು ಆರೋಪ ಮಾಡಲಾಗುತ್ತಿದೆ.
ಇಬ್ಬರು ಕ್ರೈಸ್ತ ಭಗಿನಿಯರನ್ನು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ ಅವರನ್ನು ಬಂಧಿಸಲಾಯಿತು. ಬಜರಂಗದಳದ ಕಾರ್ಯಕರ್ತರು ಸುಳ್ಳಾರೋಪ ಹೊರಿಸಿ ಸಮಸ್ಯೆ ಸೃಷ್ಟಿಸಿದರು ಎಂದರು.
ಸರಕಾರದ ವತಿಯಿಂದ ಸಮಸ್ಯೆಗಳು ಸೃಷ್ಟಿಯಾಗಿದೆ. ಸಂವಿಧಾನವನ್ನು ಬದಿಗಿಟ್ಟು ಈ ಕೃತ್ಯಗಳನ್ನು ಎಸಗಲಾಗುತ್ತಿದೆ. ಈ ಸರ್ಕಾರ ಯಾವುದೇ ಸಾಧನೆಗೈದಿಲ್ಲ. ಕೇವಲ ಕೋಮುವಾದ ಹರಡುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಸಾಲಿಡಾರಿಟಿಯ ಜಿಲ್ಲಾ ಸಮಿತಿ ಸದಸ್ಯ ನಿಹಾಲ್ ಕಿದಿಯೂರು ಮಾತನಾಡಿ, ” ಈ ದೇಶದ ಕಾನೂನನ್ನು ಸಾಂಸ್ಥಿಕವಾಗಿ ಹತ್ಯೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಈ ಮುಂಚೆ ಸಾಮಾನ್ಯ ದುಷ್ಕರ್ಮಿಗಳು ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿದ್ದರು. ಇದೀಗ ಇಡಿ, ಸಿಬಿಐಗಳನ್ನು ಬಳಸಿ ದಬ್ಬಾಳಿಕೆ ನಡೆಸಲಾಗುತ್ತಿದೆ” ಎಂದರು.
“ಇಂದು ಪ್ರತಿಭಟನೆಗಳನ್ನು ನಿರ್ಬಂಧಿಸುವ ಕೆಲಸ ನಡೆಯುತ್ತಿದೆ. ಆದರೆ ನಾವು ನ್ಯಾಯಕ್ಕಾಗಿ, ಸಂವಿಧಾನ ಬದ್ಧ ಹಕ್ಕಿಗಾಗಿ ಮರ್ದಿತರ ಪರ ದನಿಯೆತ್ತುವವರಾಗಬೇಕೆಂದು” ಹೇಳಿದರು.
ಪ್ರತಿಭಟನೆಯನ್ನುದ್ದೇಶಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸುಂದರ್ ಮಾಸ್ತರ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಲಿಡಾರಿಟಿ ಉಡುಪಿ ಜಿಲ್ಲಾಧ್ಯಕ್ಷರಾದ ಅಫ್ವಾನ್ ಬಿ ಹೂಡೆ, ನಿಸಾರ್ ಉಡುಪಿ, ಇದ್ರಿಸ್ ಹೂಡೆ, ಅಬ್ದುಲ್ ಕಾದೀರ್ ಮೊಯ್ದಿನ್, ಜಮಿಲಾ ಸದಿದಾ, ಗೌಹರ್ ಹೂಡೆ, ಆಯಾನ್ ಹೂಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಶುಐಬ್ ಮಲ್ಪೆ ನಿರೂಪಿಸಿ ಧನ್ಯವಾದವಿತ್ತರು.