ಹುಲಿ ವೇಷ ತಂಡದೊಂದಿಗೆ ನರ್ತಿಸಿ ಸಂಭ್ರಮಿಸಿದ ಆಸ್ಕರ್ ಫೆರ್ನಾಂಡಿಸ್!
ಉಡುಪಿ: ಗಣೇಶ ಚತುರ್ಥಿಯ ಶುಭಾಶಯ ತಿಳಿಸಲು ಆಗಮಿಸಿ ಹುಲಿವೇಷದ ತಂಡದೊಂದಿಗೆ ಮಾಜಿ ಕೇಂದ್ರ ಸಚಿವ ಹಾಗೂ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಆಸ್ಕರ್ ಫೆರ್ನಾಂಡಿಸ್ ಅವರು ಸ್ವತಃ ಹುಲಿವೇಷ ತಂಡದೊಂದಿಗೆ ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದ ಪ್ರಸಂಗ ಶುಕ್ರವಾರ ನಡೆಯಿತು.

ವೀರಮಾರುತಿ ವ್ಯಾಯಾಮ ಶಾಲೆ ಇದರ ಸದಸ್ಯರು ಗಣೇಶ ಚತುರ್ಥಿಯ ಪ್ರಯುಕ್ತ ಹುಲಿವೇಷದೊಂದಿಗೆ ಉಡುಪಿ ಪ್ರವಾಸಿ ಮಂದಿರದಲ್ಲಿದ್ದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಶುಭಾಶಯ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಹುಲಿವೇಷ ತಂಡದವರು ಆಸ್ಕರ್ ಅವರಿಗೆ ತಮ್ಮ ಪ್ರದರ್ಶನ ನೀಡುತ್ತಿದ್ದಾಗ ಸ್ವಲ್ಪ ಹೊತ್ತು ವೀಕ್ಷಿಸಿದ ಅವರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಜೊತೆಯಲ್ಲಿ ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ ಎ ಗಫೂರ್, ಕಾಂಗ್ರೆಸ್ ನಾಯಕರಾದ ದಿನೇಶ್ ಪುತ್ರನ್, ನಾಗೇಶ್ ಉದ್ಯಾವರ, ವೀರ ಮಾರುತಿ ತಂಡದ ಅನಿಲ್ ಪಾಲನ್, ಪ್ರಸಾದ್ ಪಾಲನ್ ಹಾಗೂ ಇತರರು ಉಪಸ್ಥಿತರಿದ್ದರು.
ಸ್ವತಃ ಹಲವಾರು ಪ್ರತಿಭೆಗಳನ್ನು ಹೊಂದಿರುವ ಆಸ್ಕರ್ ಉತ್ತಮ ಯೋಗಪಟುವಾಗಿದ್ದು, ಒರ್ವ ಈಜುಗಾರರು ಕೂಡ ಹೌದು. ಅಲ್ಲದೆ ರಾಜ್ಯಸಭೆಯಲ್ಲಿ ಇತ್ತೀಚೆಗೆ ತುಳು ಪದ್ಯವೊಂದನ್ನು ಕೂಡ ಹಾಡುವುದರ ಮೂಲಕ ಸದಸ್ಯರ ಗಮನ ಸೆಳೆದಿದ್ದರು.













