ಮಂಗಳೂರಿನಲ್ಲಿ ₹3 ಲಕ್ಷ ಮೌಲ್ಯದ 100 ಎಲ್ಎಸ್ಡಿ ಡ್ರಗ್ಸ್ ಸ್ಟ್ರಿಪ್ ವಶ: ಇಬ್ಬರ ಬಂಧನ
ಮಂಗಳೂರು: ನಿಷೇಧಿತ ಮಾದಕವಸ್ತುವಾದ ಎಲ್ಎಸ್ಡಿ (LSD) ಡ್ರಗ್ಸ್ ಸ್ಟ್ರಿಪ್ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು ₹3 ಲಕ್ಷ ಮೌಲ್ಯದ 100 ಡ್ರಗ್ಸ್ ಸ್ಟ್ರಿಪ್ಗಳು ಹಾಗೂ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹3.35 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಮಂಗಳೂರಿನ ಅಳಪೆ, ಪಡೀಲ್ನ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ (30) ಮತ್ತು ಉರ್ವಸ್ಟೋರ್ನ ಸಿದ್ದಾರ್ಥ ಶೆಟ್ಟಿ (35) ಎಂದು ಗುರುತಿಸಲಾಗಿದೆ.
ಆರೋಪಿಗಳು ಬೆಂಗಳೂರಿನಿಂದ ನಿಷೇಧಿತ ಎಲ್ಎಸ್ಡಿ ಮಾದಕವಸ್ತುವನ್ನು ಖರೀದಿಸಿ, ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಮಧ್ಯಾಹ್ನ ಮಂಗಳೂರಿನ ಪಡೀಲ್ ರೈಲ್ವೆ ಸೇತುವೆ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ಅವರಿಂದ 100 ಎಲ್ಎಸ್ಡಿ ಡ್ರಗ್ಸ್ ಸ್ಟ್ರಿಪ್ಗಳು ಹಾಗೂ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು. ಮತ್ತೊಬ್ಬ ಆರೋಪಿ ಸಿದ್ದಾರ್ಥ ಶೆಟ್ಟಿ ವಿರುದ್ಧ ಮಂಗಳೂರು ನಗರದ ಬರ್ಕೆ ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ಗಲಾಟೆ, ಕೊಲೆಯತ್ನ ಹಾಗೂ ಗಾಂಜಾ ಮಾರಾಟ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮಾದಕವಸ್ತು ಮಾರಾಟ ಮತ್ತು ಸಾಗಾಟದ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.













