12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್ಪಿಸಿ ಆರೋಪಿಯ ಬಂಧನ
ಮಂಗಳೂರು: ಸುಮಾರು 12 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಎಲ್ಪಿಸಿ (Long Pending Case) ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಕೀಲ್ (33), ತಂದೆ ಇಸ್ಮಾಯಿಲ್, ಜಪ್ಪು ನಿವಾಸಿ ಎಂದು ಗುರುತಿಸಲಾಗಿದೆ.
ಆರೋಪಿಯ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 236/2014ರಡಿ ಭಾರತೀಯ ನ್ಯಾಯ ಸಂಹಿತೆಯ ಹಿಂದಿನ ಐಪಿಸಿ ಕಲಂ 364(ಎ), 395 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿದ ದಿನದಿಂದಲೂ ಆತ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ಕಾರಣ, ಆರೋಪಿಯ ವಿರುದ್ಧ ಅಬ್ಸ್ಕಾಂಡಿಂಗ್ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು.
ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು ಪ್ರಕರಣವನ್ನು ಎಲ್ಪಿಸಿ (Long Pending Case) ಆಗಿ ಪರಿವರ್ತಿಸಿತ್ತು.
ಆರೋಪಿಯ ಇರುವಿಕೆ ಕುರಿತು ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪುಟ್ಟರಾಮ (HC-465) ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮಲಿಕ್ ಜಾನ್ (PC-2367) ಅವರು ನಂದಿಗುಡ್ಡ ಸರ್ಕಲ್ ಸಮೀಪ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆಯನ್ನು ಪೊಲೀಸರು ಕೈಗೊಂಡಿದ್ದಾರೆ.













