2ನೇ ದಿನವೂ ಅಕ್ರಮ ಕೋಳಿ ಅಂಕ; ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ 27 ಮಂದಿಯ ವಿರುದ್ಧ ಪ್ರಕರಣ ದಾಖಲು

Spread the love

2ನೇ ದಿನವೂ ಅಕ್ರಮ ಕೋಳಿ ಅಂಕ; ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ 27 ಮಂದಿಯ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಕೇಪು ಗ್ರಾಮದ ಕೇಪು ಎಂಬಲ್ಲಿ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ರವಿವಾರವೂ ಅಕ್ರಮ ಕೋಳಿ ಅಂಕ ನಡೆದಿದ್ದು, ಈ ಸಂಬಂಧ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ ಕುಂಪಲ ಸಹಿತ 27 ಮಂದಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 20 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇಪುವಿನ ಮುರಳೀಧರ ರೈಯವರಿಗೆ ಸೇರಿದ ಗದ್ದೆಯಲ್ಲಿ ರವಿವಾರ ಹಲವು ಜನರು ಸೇರಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಗದ್ದೆಯಲ್ಲಿ ಹಲವು ಮಂದಿ ಗುಂಪು ಸೇರಿ ಹಿಂಸಾತ್ಮಕವಾಗಿ ಕೋಳಿ ಅಂಕವಾಡುತ್ತಿದ್ದರು. ಅಲ್ಲಿ ನೆರೆದಿದ್ದವರಿಗೆ ಅಕ್ರಮ ಕೋಳಿ ಅಂಕದ ಬಗ್ಗೆ ಪೊಲೀಸರು ಕಾನೂನು ತಿಳುವಳಿಕೆ ನೀಡಿದ್ದಾರೆ. ಆದರೆ ಅಲ್ಲಿ ನೆರೆದಿದ್ದವರು ಸ್ಥಳದಿಂದ ತೆರಳದೇ ನಿಂತುಕೊಂಡಿದ್ದರು. ಅದಲ್ಲದೇ ಸ್ಥಳದಲ್ಲಿ ಹಾಜರಿದ್ದ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಮುರಳೀಧರ ರೈ, ದಯಾನಂದ ಉಜಿರೆಮಾರು, ಹರಿಪ್ರಸಾದ್ ಯಾದವ್, ಅಶೋಕ ಶೆಟ್ಟಿ ವಿಟ್ಲ, ರಾಜೇಶ್ ಬಾಳೆಕಲ್ಲು ಎಂಬವರು ಅಲ್ಲಿ ಸೇರಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕ ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ 20 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು 20 ಹುಂಜಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿ (ಬಾಲು)ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದವರು ಹಾಗೂ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಆರೋಪದಲ್ಲಿ ಒಟ್ಟು 27 ಜನರ ವಿರುದ್ಧ ವಿ ಅ.ಕ್ರ: 191/2025, ಕಲಂ: 189(2), 49, 221, 223, 190 BNS 2023 ಮತ್ತು 3, 11 PREVENTION OF CRUELTY TO ANIMALS ACT ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments