2023ರಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಶಾಲೆಟ್ ಪಿಂಟೋ
ಮಂಗಳೂರು: ಕ್ಷೇತ್ರ ವಿಂಗಡನೆ ರಹಿತವಾಗಿ 2023ರಲ್ಲಿ ಅಂಗೀಕಾರಗೊಂಡಿರುವ ಶೇ. 33 ಮಹಿಳಾ ಮೀಸಲಾತಿಯನ್ನು ಅನುಷ್ಟಾನಗೊಳಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವಿಂಗಡನೆ ಹಾಗೂ ಜನಗಣತಿಯೊಂದಿಗೆ ಜೋಡಿಸಿಕೊಂಡು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಕೇಂದ್ರ ಸರಕಾರದ ಕುತಂತ್ರಕ್ಕೆ ಸೋಲಾಗಿರುವುದೇ ಹೊರತು 2023ರಲ್ಲಿ ಅಂಗೀಕಾರಗೊಂಡಿರುವ ಶೇ. 33 ಮೀಸಲಾತಿ ಸರ್ವ ಪಕ್ಷಗಳಿಂದ ಅಂಗೀಕಾರಗೊಂಡಿದೆ. ಅದನ್ನು ಯಥವತ್ತಾಗಿ ಜಾರಿಗೊಳಿಸುವ ಕಾರ್ಯವನ್ನು ಪ್ರಧಾನಿ ಮೋದಿಯವರು ಮಾಡಬೇಕು ಎಂದರು.
80ರ ದಶಕದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮಹಿಳೆಯ ಮೀಸಲಾತಿಯ ಕನಸು ಕಂಡಿದ್ದರು. 23-74ನೆ ಸಾಲಿನಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಸ್ಥಳೀಯಾಡಳಿತದಲ್ಲಿ ಶೇ. 33 ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿರುವುದು ಕಾಂಗ್ರೆಸ್. ಇದೀಗ ಕ್ಷೇತ್ರ ವಿಂಗಡನೆಯ ಮಹಿಳಾ ಮೀಸಲಾತಿಯ ವಿಧೇಯಕಕ್ಕೆ ಸೋಲಾಗಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ಬೊಬ್ಬೆ ಹಾಕುತ್ತಿರುವ ಬಿಜೆಪಿಯ ಮಹಿಳೆಯರು, ಕೇಂದ್ರ ಸರಕಾರಕ್ಕೆ ಈಗಾಗಲೇ ಅಂಗೀಕಾರ ಗೊಂಡಿರುವ ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಲಿ ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಂತಹ ಮಸೂದೆಯನ್ನು ಮಂಡನೆ ಮಾಡುವ ಬಗ್ಗೆ ಚುನಾವಣಾ ಆಯೋಗಕ್ಕೆ ಅರಿವಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರಕಾರ ಹಿಂದೆಯೂ ಮಹಿಳಾ ಮೀಸಲಾತಿ ಪರವಾಗಿದ್ದು, ಈಗಲೂ ಬೆಂಬಲ ನೀಡಲಿದೆ. ಪ್ರಿಯಾಂಕಾ ಗಾಂಧಿಯವರು ಈಗಾಗಲೇ ಕೇಂದ್ರಕ್ಕೆ ಬಹಿರಂಗ ಸವಾಲು ಹಾಕಿದ್ದು, ಮಹಿಳಾ ಮೀಸಲಾತಿ ಜಾರಿಯಾಗುವ ನಮ್ಮ ಕನಸು ನನಸಾಗಬೇಕು. ಸಿದ್ಧರಾಮಯ್ಯ ಸರಕಾರದಲ್ಲಿ ವಿವಿಧ ಯೋಜನೆಗಳ ಮೂಲಕ ಮಹಿಳೆಯರು ಸಬಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿ ಮೂಲಕ ರಾಜಕೀಯವಾಗಿ ಎದ್ದು ನಿಲ್ಲಲು ಅವಕಾಶ ಆಗಬೇಕು ಎಂದವರು ಹೇಳಿದರು.
ಗೋಷ್ಟಿಯಲ್ಲಿ ಮುಖಂಡರಾದ ನಮಿತಾ ಡಿ ರಾವ್, ಗೀತಾ ಅತ್ತಾವರ, ಸುರೇಖಾ ಚಂದ್ರಹಾಸ್, ಚಂದ್ರಕಲಾ ಜೋಗಿ, ರೂಪ, ಸಾರಿಕಾ, ಉಷಾ ಅಂಚನ್ ಉಪಸ್ಥಿತರಿದ್ದರು.
‘ನಾರಿಶಕ್ತಿ ಅಧಿನಿಯಮ ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಭ್ರೂಣ ಹತ್ಯೆಯ ಪದ ಬಳಕೆ ಮಾಡಿದ್ದಾರೆ. ಕುತಂತ್ರದ ಮಸೂದೆಗಾಗಿ ಈ ಪದ ಬಳಕೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ವರದಕ್ಷಿಣೆ ರಹಿತ ವಿವಾಹ ಕಾಯ್ದೆ, ಮಹಿಳಾ ಆಯೋಗ ರಚನೆ, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ, ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು, ಪಾಶ್ ಕಾಯಿದೆ ಮೂಲಕ ಕಾಂಗ್ರೆಸ್ ಸರಕಾರ ಮಹಿಳೆಯರ ಘನತೆಯನ್ನು ಎತ್ತಿಹಿಡಿದಿದೆ. ರಾಜ್ಯದಲ್ಲಿಯೂ ಹಲವಾರು ಯೋಜನೆಗಳ ಮೂಲಕ ಮಹಿಳೆಯರಿಗೆ ಗೌರವ ನೀಡಲಾಗಿದೆ. ಉನ್ನಾವೋ, ಹತ್ರಾಸ್ ಪ್ರಕರಣ, ಯುಪಿಯಲ್ಲಿ ಅತ್ಯಾಚಾರಿ ಆರೋಪಿಗೆ ಬಹಿರಂಗವಾಗಿ ಸನ್ಮಾನ ಮೂಲಕ ಬಿಜೆಪಿ ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆ ನೀಡಿದೆ. ಮಹಿಳಾ ಮೀಸಲಾತಿ ಎಂಬ ರಾಜಕೀಯ ಸ್ವಾತಂತ್ರ್ಯಕ್ಕೆ ಕ್ಷೇತ್ರ ವಿಂಗಡನೆ, ಗಣತಿ ಎಂಬ ಸಂಕೋಲೆ ಹಾಕಿ ಕಟ್ಟಿ ಹಾಕುವ ಪ್ರಯತ್ನ ಮಾಡಲಾಗಿದೆ. ಕಾಂಗ್ರೆಸ್ 1989ರಿಂದಲೂ ಮಹಿಳಾ ಮೀಸಲಾತಿಗೆ ಪ್ರಯತ್ನಿಸುತ್ತಾ ಬಂದಿದೆ. ಇದೀಗ ಸ್ಪಷ್ಟ ಬಹುಮತದೊಂದಿಗೆ ಸರಕಾರ ಹೊಂದಿರುವ ಬಿಜೆಪಿ 2023ರಲ್ಲಿ ಅಂಗೀಕಾರವಾಗಿರುವ ಶೇ. 33ರ ಮಹಿಳಾ ಮೀಸಲಾತಿಯನು ಮುಂದಿನ ಚುನಾವಣೆಯಲ್ಲಿ ಜಾರಿಗೊಳಿಸಬೇಕು. ಅಲ್ಪಸಂಖ್ಯಾತ, ದಮನಿತ ಮಹಿಳೆಯರಿಗೂ ಸ್ಥಾನಮಾನ ಸಿಗುವಂತಾಗಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರರಾದ ಯು.ಟಿ.ಫರ್ಝಾನ ಆಗ್ರಹಿಸಿದರು.













