ಮಂಗಳೂರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆಗಾಗಿ 35 ಗಂಟೆಗಳ ನಿರಂತರ ಗಾಯನ ಪೂರ್ಣ: 35 ಸಂಗೀತ ತಂಡಗಳಿಂದ ಪ್ರಸ್ತುತಿ
ಮಂಗಳೂರು: ಮಾಂಡ್ ಸೊಭಾಣ್ ಸಂಸ್ಥೆಯ 40ನೇ ವರ್ಷದ ಸಂಭ್ರಮದ ಅಂಗವಾಗಿ ಹಾಗೂ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದ ಭಾಗವಾಗಿ ಮಂಗಳೂರಿನ ಟೌನ್ ಹಾಲ್‌ನಲ್ಲಿ ಆಯೋಜಿಸಲಾಗಿರುವ ಸುದೀರ್ಘ ಬಹು-ಗಾಯಕರ ಗಾಯನ ಮ್ಯಾರಥಾನ್ ಗಿನ್ನೆಸ್ ವಿಶ್ವ ದಾಖಲೆ ಯತ್ನದಲ್ಲಿ 35 ಗಂಟೆಗಳ ನಿರಂತರ ಗಾಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ನವೆಂಬರ್ 15ರವರೆಗೆ ಒಟ್ಟು 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಕಾಲ ನಿರಂತರವಾಗಿ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಸುಮಾರು 300 ಗಂಟೆಗಳ ಈ ಸುದೀರ್ಘ ಗಾಯನ ಕಾರ್ಯಕ್ರಮವು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ಕಟ್ಟುನಿಟ್ಟಿನ ನಿಯಮಾವಳಿಗಳಂತೆ ನಡೆಯುತ್ತಿದ್ದು, ಯಾವುದೇ ಹಾಡು ಅಥವಾ ಗಾಯಕರು ಪುನರಾವರ್ತನೆಯಾಗದಂತೆ ಆಯೋಜಿಸಲಾಗಿದೆ.
ಸಾಧನೆಯ ಎರಡನೇ ದಿನದ ವೇಳೆಗೆ ಕರಾವಳಿ ಕರ್ನಾಟಕ, ಉತ್ತರ ಕನ್ನಡ ಹಾಗೂ ಗೋವಾ ಸೇರಿದಂತೆ ವಿವಿಧ ಪ್ರದೇಶಗಳ 35 ಸಂಗೀತ ತಂಡಗಳು ವೇದಿಕೆಯಲ್ಲಿ ತಮ್ಮ ಗಾಯನ ಪ್ರಸ್ತುತಿಯನ್ನು ನೀಡಿದ್ದಾರೆ.

ಮಂಗಳೂರಿನ ಟೌನ್ ಹಾಲ್‌ನಲ್ಲಿ ನಡೆಯುತ್ತಿರುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಕೊಂಕಣಿ ಭಾಷಿಕ ಸಮುದಾಯದವರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.
ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸಿರುವ ಈ ಬೃಹತ್ ಗಾಯನ ಮ್ಯಾರಥಾನ್ ಹೊಸ ಗಿನ್ನೆಸ್ ವಿಶ್ವ ದಾಖಲೆಯತ್ತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.












