5 ನೇ ಪರ್ಯಾಯ 35ನೇ ಸುಧಾಮಂಗಲ, ಪೇಜಾವರ ಶ್ರೀ ವಿನೂತನ ದಾಖಲೆ

Spread the love

5 ನೇ ಪರ್ಯಾಯ 35ನೇ ಸುಧಾಮಂಗಲ ..!! ಪೇಜಾವರ ಶ್ರೀ ವಿನೂತನ ದಾಖಲೆ..!!

ಉಡುಪಿ: ಉಡುಪಿಯ ಅಷ್ಟ ಮಠಗಳ ಇತಿಹಾಸದಲ್ಲಿ ಐದನೇ ಬಾರಿಗೆ ದ್ವೈವಾರ್ಷಿಕ ಕೃಷ್ಣ ಪೂಜಾ ಪರ್ಯಾಯ ದೀಕ್ಷೆ ಸ್ವೀಕರಿಸಿ ಈಗಾಗಲೇ ಒಂದು ದಾಖಲೆ ಬರೆದಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರು ಸೋಮವಾರದಂದು ತಮ್ಮ 35ನೇ ಶ್ರೀ ಮನ್ನ್ಯಾಯ ಸುಧಾ ಮಂಗಲೋತ್ಸವವನ್ನು ಸಂಪನ್ನಗೊಳಿಸಿ ಮತ್ತೊಂದು ದಾಖಲೆ ನಿರ್ಮಿಸಿದರು.

ಸೋಮವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಧಾರ್ಮಿಕ ವಾತಾವರಣ .  ಹೂವಿನಿಂದ ಸಿಗಾರಗೊಂಡ ವೇದಿಕೆಯಲ್ಲಿ ನಡುವೆ ರಜತಮಂಟಪ ಮಧ್ಯದಲ್ಲಿ  ಸ್ವರ್ಣ ಪಲ್ಲಕ್ಕಿ ಯಲ್ಲಿ ಹೊತ್ತು ತಂದ  ಶ್ರೀ ಮನ್ನ್ಯಾಯ ಸುಧಾಗ್ರಂಥ ಮತ್ತು ಶ್ರೀ ವೇದವ್ಯಾಸರ ಸಾಲಿಗ್ರಾಮ ಮತ್ತು ವಿಗ್ರಹವನ್ನು ಸ್ಥಾಪಿಸಿದ ಬಳಿಕ ಸಾನ್ನಿಧ್ಯ ವಹಿಸಿದ್ದ ಬನ್ನಂಜೆ ರಾಘವೇಂದ್ರತೀರ್ಥರು ,ಸೋದೆ ಶ್ರೀ ವಿಶ್ವವಲ್ಲಭ ತೀರ್ಥರು ಕಾಣಿಯೂರು ಶ್ರೀ ವಿದ್ಯಾವಲ್ಲಭ  ತೀರ್ಥರು , ಬೆಂಗಳೂರಿನ ವಿಶ್ವ ಭೂಷಣ ತೀರ್ಥರು ,ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥರು , ಕೃಷ್ಣಾ ಪುರ ಶ್ರೀ ವಿದ್ಯಾಸಾಗರ ತೀರ್ಥರು , ಮಂತ್ರಾಲಯ  ಶ್ರೀ ಸುಬುಧೇಂದ್ರ ತೀರ್ಥರು ,ಪೇಜಾವರ ಕಿರಿಯ ಶ್ರೀ ವಿಶ್ವ ಪ್ರಸನ್ನತೀರ್ಥರು ,ಉಪನ್ಯಾಸ ನೀಡಿ ಶ್ರೀ ಮಧ್ವಾಚಾರ್ಯರ ಅಣುವ್ಯಾಖ್ಯಾನ ಗ್ರಂಥಕ್ಕೆ ಶ್ರೀ ಜಯತೀರ್ಥರು  ನ್ಯಾಯಸುಧಾ ವ್ಯಾಖ್ಯಾನ ಬರೆದು ಭಗವಂತನ ಅಸ್ತಿತ್ವ ,ಗುಣ ಪರಿಪೂರ್ಣತ್ವ , ಜಗತ್ತಿನ ಸತ್ಯತೆಯೇ ಮೊದಲಾದವುಗಳ ವಿಚಾರಗಳಲ್ಲಿ ಭಕ್ತರಿಗೆ ಬರಬಹುದಾದ ಸಂದೇಹಗಳನ್ನು‌ಅತ್ಯಂತ ಸರಳವಾಗಿ ಪರಿಹರಿಸಿ ಮಹದುಪಕಾರ ಮಾಡಿದ್ದಾರೆ .ಪೇಜಾವರ ಶ್ರೀಗಳು ಅದನ್ನು ನಿರಂತರ ಪಾಠ , ಪ್ರವಚನಗಳ ಮೂಲಕ ನೂರಾರು ವಿದ್ವಾಂಸರನ್ನು ಸಮಾಜಕ್ಕೆ ಧಾರೆಯೆರೆದಿದ್ದಾರೆ . ಪೇಜಾವರ ಶ್ರೀಗಳು ಜ್ಞಾನಗಂಗೆಯನ್ನು ಹರಿಸುತ್ತಿರುವ ಭಗೀರಥ ,ಅವರೊಬ್ಬ ಕ್ಷೀರ ಸಾಗರ ಸದೃಶರೂ ,ಶ್ರೇಷ್ಠ ಸುಧಾಕರರೂ ಆಗಿದ್ದಾರೆಂದು ಬಣ್ಣಿಸಿದರು.

ನಂತರ ಮಂಗಲ ವ್ಯಾಖ್ಯಾನ ಮಂಡಿಸಿದ ಪೇಜಾವರ ಶ್ರೀಗಳು ನಮ್ಮಲ್ಲಿ ಅನೇಕ ದಾರ್ಶನಿಕರು ಬಂದು ಹೋಗಿದ್ದಾರೆ.ಆದರೆ ಭಗವಂತನ ಅಸ್ತಿತ್ವ ,ಜೀವ ಜಡ ಭೇದ ,ಜಗತ್ತಿನ ಸತ್ಯತ್ವ ,ಜೀವಾತ್ಮ – ಪರಮಾತ್ಮ ಭೇದ ಎಂಬಿತ್ಯಾದಿ ವಿಚಾರಗಳ ಬಗೆಗೆ ಯಾರೊಬ್ಬರೂ ಸರಿಯಾದ ಮಾರ್ಗದರ್ಶನ ನೀಡದೇ ಸಂಶಯಗಳನ್ನು ಉಳಿಸಿ ಹೋದರು .ಆ ಹೊತ್ತಿನಲ್ಲಿ ಅವತರಿಸಿದ ಮಧ್ವರು ಈ ಎಲ್ಲ ಗೊಂದಲಗಳಿಗೆ ಮಂಗಲ ಹಾಡಿ ಭಗವಂತನ ಗುಣಪರಿಪೂರ್ಣತೆ ,  ದೋಷ ದೂರತ್ವ , ಜಗತ್ತಿನ ವಿಲಕ್ಷಣ ಅಸ್ತಿತ್ವ ,ಅನಂತತೆ ,ಜೀವ ಜಡ ಭೇದ ,ಜೀವಾತ್ಮ ಪರಮಾತ್ಮ ಭೇದಗಳನ್ನು ಅತ್ಯಂತ ಸಮರ್ಥವಾಗಿ ಮಂಡಿಸಿ ಸಮಗ್ರ ಜಗತ್ತಿಗೆ ಅಧ್ಯಾತ್ಮದ ಹೊಸ ಬೆಳಕನ್ನು ನೀಡಿದರು.ಆದ್ದರಿಂದ ಭಗವಂತನ ಬಗೆಗೆ ತಿಳಿದುಕೊಳ್ಳಬೇಕಾದರೆ ದ್ವೈತ ದರ್ಶನಕ್ಕಿಂತ ಮತ್ತೊಂದು ಮಾರ್ಗವೇ ಇಲ್ಲ .ಅಂಥಹ ಮಧ್ವರ ಗ್ರಂಥವನ್ನು ಜಯತೀರ್ಥರು ಮತ್ತಷ್ಟು ಮಥಿಸಿ ಭಗವಜ್ಞಾನದ ಬೆಣ್ಣೆಯನ್ನು ನಮಗೆಲ್ಲ ಬಡಿಸಿದ್ದಾರೆ. ಅದರ ನಿರಂತರ ಅಧ್ಯಯನ ,ಚಿಂತನೆ ,ಶ್ರವಣಗಳು ಭಕ್ತರಿಗೆ ಲೌಕಿಕವಾಗಿ ಅನಂತ ಸಂಪತ್ತುಗಳ ಸಿದ್ಧಿಯ ಜೊತೆಗೆ ಪಾರಮಾರ್ಥಿಕವಾಗಿ ಮೋಕ್ಷಮಾರ್ಗವನ್ನು ತೆರದಿಡುತ್ತದೆ ಎಂದರು .ಗರುಡನು ತನ್ನ ಹೆಗಲ ಮೇಲೆ ಭಗವಂತನನ್ನು ಧರಿಸಿದರೆ ,ಶ್ರೀ ಮಧ್ವರು ಹೃದಯ ಮಧ್ಯದಲ್ಲಿ ಭಗವಂತನ ನ ಅನಂತರೂಪಗಳನ್ನು ಧರಿಸಿ ಭಕ್ತರಿಗೆ ದರ್ಶನ ಮಾಡಿಸಿದ ಮಹಾನುಭಾವರು ಎಂದರು .

ಬಳಿಕ ಶ್ರೀ ಮನ್ನ್ಯಾಯ ಸುಧಾಗ್ರಂಥಕ್ಕೆ ಮಹಾಮಂಗಲಾರತಿ ಬೆಳಗಿ. ಈ ಬಾರಿ ಸುಧಾಧ್ಯಯನ ಮುಗಿಸಿದ 20ವಿದ್ಯಾರ್ಥಿಗಳನ್ನು ಸಂಮಾನಿಸಿದರು .

ಇದೇ ಸಂದರ್ಭ ಮಂತ್ರಾಲಯ ಕ್ಷೇತ್ರದ ವತಿಯಿಂದ ಪೇಜಾವರ ಶ್ರೀ ಗಳಿಗೆ ಮುತ್ತು ,ರತ್ನ ಹಾಗೂ ನಾಣ್ಯಗಳಿಂದ ಅಭಿಷೇಕ ನೆರವೇರಿಸಿ ಶ್ರೀ ಸುಬುಧೇಂದ್ರ ತೀರ್ಥರು ಗೌರವಿಸಿದರು.

ಸುಧಾಧ್ಯಯನದಲ್ಲಿ ಹಿರಿಯ ಶ್ರೀಗಳಿಗೆ ಸಾಥ್ ನೀಡಿದ ಕಿರಿಯ ಶ್ರೀಗಳನ್ನೂ  ಮಂತ್ರಾಲಯದ  ವಿದ್ವಾನ್ ತರ್ಕ ಕೇಸರಿ ರಾಜಾ ಎಸ್ ಗಿರಿ ಆಚಾರ್ಯರು ಗೌರವಿಸಿದರು .

ತಿರುಪತಿಯಿಂದ ತರಲಾದ ಶ್ರೀನಿವಾಸ ದೇವರ ಶೇ಼ಷ ವಸ್ತ್ರ ಸಹಿತ ಪ್ರಸಾದವನ್ನು ಟಿ ಪಿ ಅನಂತ ಹಾಗೂ ಪಗಡಾಲ ಆನಂದತೀರ್ಥಾಚಾಚಾರ್ ಅರ್ಪಿಸಿದರು .ಪರ್ಯಾಯ ಮಠದ ವತಿಯಿಂದ ಎಲ್ಲ ಶ್ರೀ ಪಾದರುಗಳನ್ನು ದಿವಾನರಾದ ಎಂ ರಘುರಾಮಾಚಾರ್ಯ ಗೌರವಿಸಿದರು .

ಶ್ರೀ ವಿಶ್ವಗುರುಪ್ರಿಯ ತೀರ್ಥರು ,ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ , ಹರಿದಾಸ ಉಪಾಧ್ಯಾಯ ,ಆನಂದ ತೀರ್ಥ ನಾಗಸಂಪಿಗೆ ,ಎ ಹರಿದಾಸ ಭಟ್ ,ಡಿ ಪ್ರಹ್ಲಾದಾಚಾರ್ಯ,  ಸತ್ಯ ನಾರಾಯಣಾಚಾರ್ಯ ,ನಾಗೇಂದ್ರಾಚಾರ್ಯ ,ಮೊದಲಾದವರು ಹಾಗೂ ಕೃಷ್ಣ ಮಠದ ಆಸ್ಥಾನ ವಿದ್ವಾಂಸರು ಉಪಸ್ಥಿತರಿದ್ದರು .ಬದರಿನಾಥ ಆಚಾರ್ಯರು ನಿರೂಪಿಸಿದರು .


Spread the love