ಪೆರಂಪಳ್ಳಿ ಚರ್ಚ್ ವೃತ್ತದಲ್ಲಿ ಅಪಘಾತ ನಿಯಂತ್ರಣಕ್ಕೆ 6 ಬ್ಯಾರಿಕೇಡ್ ಹಸ್ತಾಂತರ
ಉಡುಪಿ: ಪೆರಂಪಳ್ಳಿ ಚರ್ಚ್ ವೃತ್ತದ ಬಳಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪವರ್ ಫ್ರೆಂಡ್ಸ್ ಪೆರಂಪಳ್ಳಿ ಸಂಘಟನೆಯ ನೇತೃತ್ವದಲ್ಲಿ ಆರು ಬ್ಯಾರಿಕೇಡ್ಗಳನ್ನು ಹಸ್ತಾಂತರಿಸಲಾಯಿತು.
ಅನಿಶ್ ಜನರಲ್ ಸ್ಟೋರ್ಸ್ ಪೆರಂಪಳ್ಳಿ, ಯೂನಿಯನ್ ಬ್ಯಾಂಕ್ ಪೆರಂಪಳ್ಳಿ ಹಾಗೂ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ಸಂಸ್ಥೆಗಳ ಸಹಕಾರದಿಂದ ಬ್ಯಾರಿಕೇಡ್ಗಳನ್ನು ಒದಗಿಸಲಾಗಿದ್ದು, ಪವರ್ ಫ್ರೆಂಡ್ಸ್ ಅಧ್ಯಕ್ಷ ಅನಿಲ್ ಗೊನ್ಸಾಲ್ವಿಸ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಫಾತಿಮಾ ಮಾತೆ ಚರ್ಚ್ನ ಧರ್ಮಗುರು ರೆಜಿನಾಲ್ಡ್ ಪಿಂಟೊ, ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಧರ್ಮಗುರು ರೆಜಿನಾಲ್ಡ್ ಪಿಂಟೊ ಅವರು, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪವರ್ ಫ್ರೆಂಡ್ಸ್ ಸಂಘಟನೆಯ ಸದಸ್ಯರನ್ನು ಅಭಿನಂದಿಸಿ, ದೇವರ ಕೃಪೆ ಎಲ್ಲರ ಮೇಲಿರಲಿ ಎಂದು ಹಾರೈಸಿದರು.
ಮಹೇಶ್ ಪ್ರಸಾದ್ ಅವರು ಮಾತನಾಡಿ, ಊರಿನ ಒಳಿತಿಗಾಗಿ ದಾನಿಗಳ ಸಹಕಾರದೊಂದಿಗೆ ಅಪಘಾತ ನಿಯಂತ್ರಣಕ್ಕೆ ಬ್ಯಾರಿಕೇಡ್ಗಳನ್ನು ಅಳವಡಿಸಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸಲು ಸಾಧ್ಯವಾಗಲಿದೆ ಎಂದು ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.
ರಮೇಶ್ ಕಾಂಚನ್ ಮಾತನಾಡಿ, ಅಪಘಾತ ತಡೆಗಟ್ಟುವ ಉದ್ದೇಶದಿಂದ ಯುವಕರು ಸಂಘಟಿತರಾಗಿ ಕೈಗೊಂಡಿರುವ ಈ ಕಾರ್ಯ ಇತರ ಊರುಗಳಿಗೂ ಮಾದರಿಯಾಗಲಿದೆ. ಬ್ಯಾರಿಕೇಡ್ಗಳ ಅಳವಡಿಕೆಯಿಂದ ವಾಹನಗಳ ವೇಗವನ್ನು ನಿಯಂತ್ರಿಸಲು ಸಾಧ್ಯವಾಗುವುದರ ಜೊತೆಗೆ, ವೃತ್ತದ ಬಳಿ ರಸ್ತೆ ದಾಟುವ ಸಾರ್ವಜನಿಕರ ಸುರಕ್ಷತೆಗೂ ಅನುಕೂಲವಾಗಲಿದೆ. ಇಂತಹ ಸಮಾಜಮುಖಿ ಚಟುವಟಿಕೆಗಳಿಗೆ ಎಲ್ಲರ ಬೆಂಬಲವಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಪೆರಂಪಳ್ಳಿ ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯರು, ಸ್ಥಳೀಯ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಕೃಷಿಕ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.













