ಅಧಿವೇಶನದಲ್ಲಿ ಕರಾವಳಿ ರೈತರ ಸಂಕಷ್ಟದ ಚರ್ಚೆಯಾಗಲಿ – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಉಡುಪಿ ಜಿಲ್ಲೆಯ ಶಾಸಕರುಗಳು ಈ ಭಾರಿಯ ಮಳೆಗಾಲದ ಅಧಿವೇಶನದಲ್ಲಿ ಒಂದಷ್ಟು ಸಮಯವನ್ನು ಕರಾವಳಿಯ ರೈತರ ಸಂಕಷ್ಟ, ಸಮಸ್ಯೆಗಳ ಚರ್ಚೆಗೆ ಮೀಸಲಾಗಿಡುವಂತೆ ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಆಗೃಹಿಸಿದ್ದಾರೆ.
ಕರಾವಳಿಯಲ್ಲಿ ಈ ಭಾರಿ ವಾಡಿಕೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ವಿಶೇಷವಾಗಿ ಭತ್ತ ಹಾಗೂ ಅಡಿಕೆ ಬೆಳೆಗಳು ಭೀಕರ ಮಳೆಗೆ ಸಂಪೂರ್ಣ ನಾಶಗೊಂಡು ರೈತರು ಅತೀವ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಡಿಕೆ ಕೊಳೆ ರೋಗ ಬಾರದಂತೆ ಔಷಧಿ ಸಿಂಪಡಣೆಯನ್ನು ಹಲವು ಭಾರಿ ಮಾಡಿದರೂ ಕೂಡ ಅತೀವ ಮಳೆಯಿಂದ ಅಡಿಕೆ ಫಸಲು ಸಂಪೂರ್ಣ ನಾಶವಾಗಿದೆ. ಕರಾವಳಿಯ ರೈತರು ಜೀವನೋಪಾಯಕ್ಕೆ ಅಡಿಕೆ, ಭತ್ತ, ತೆಂಗು ಇತ್ಯಾದಿ ಬೆಳೆಗಳನ್ನೇ ಹೆಚ್ಚಾಗಿ ನಂಬಿದ್ದು ಈ ಕೃಷಿ ನಾಶದಿಂದ ಕಂಗಾಲಾಗಿದ್ದಾರೆ. ಆದುದರಿಂದ ಜಿಲ್ಲೆಯ ಶಾಸಕರುಗಳು ಅಧಿವೇಶನದಲ್ಲಿ ಪ್ರಶ್ನೆಗಳಲ್ಲದೆ ಒಂದಷ್ಟು ಅವಧಿಯನ್ನು ಕರಾವಳಿಯ ರೈತರ ಸಮಸ್ಯೆಗಳನ್ನು ಮಾತ್ರ ಚರ್ಚಿಸಲು ಮೀಸಲು ಇಡುವಂತೆ ಹಾಗೂ ಕೃಷಿ ಹಾನಿಗೆ ದೊಡ್ಡ ಪ್ರಮಾಣದ ಪರಿಹಾರ ಮೊತ್ತ ನೀಡುವಂತೆ ಸರ್ಕಾರದ ಗಮನ ಸೆಳೆಯಬೇಕಾಗಿ ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.