ಕಡಬದಲ್ಲಿ ಅಕ್ರಮ ಕೋಳಿ ಅಂಕ ಜೂಜಾಟ: ಓರ್ವನ ಬಂಧನ, ಐದು ಕೋಳಿಗಳು ಹಾಗೂ ಕತ್ತಿ ವಶಕ್ಕೆ

Spread the love

ಕಡಬದಲ್ಲಿ ಅಕ್ರಮ ಕೋಳಿ ಅಂಕ ಜೂಜಾಟ: ಓರ್ವನ ಬಂಧನ, ಐದು ಕೋಳಿಗಳು ಹಾಗೂ ಕತ್ತಿ ವಶಕ್ಕೆ

ಕಡಬ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕದ ಜೂಜಾಟ ನಡೆಸುತ್ತಿದ್ದವರ ಮೇಲೆ ಕಡಬ ಪೊಲೀಸರು ನ.9ರಂದು ಸಂಜೆ ದಾಳಿ ನಡೆಸಿದ್ದು, ಓರ್ವನನ್ನು ವಶಕ್ಕೆ ಪಡೆದು ಐದು ಕೋಳಿಗಳು ಹಾಗೂ ಕತ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಬೀರೋಳಿಗೆ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಜನರು ಗುಂಪು ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದ ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ. ಪೊಲೀಸರು ದಾಳಿ ನಡೆಸಿದಾಗ ಜೂಜಾಟದಲ್ಲಿ ಭಾಗಿಯಾಗಿದ್ದ ಹಲವರು ಸ್ಥಳದಿಂದ ಓಡಿಹೋಗಿದ್ದಾರೆ.

ಈ ವೇಳೆ ಚಾರ್ವಾಕ ನಿವಾಸಿ ಬಾಲಕೃಷ್ಣ (46) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದಾಗ, ಜೂಜಾಟದಿಂದ ಗಳಿಸಿದ್ದ ₹1,030 ನಗದು ಪತ್ತೆಯಾಗಿದೆ. ಸ್ಥಳದಲ್ಲಿದ್ದ ಐದು ಕೋಳಿಗಳು ಹಾಗೂ ಕೋಳಿ ಅಂಕಕ್ಕೆ ಬಳಸುತ್ತಿದ್ದ ಕತ್ತಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 133/2026ರಂತೆ ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 87, 93, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960ರ ಕಲಂ 11(1)(m)(ii), 11(1)(n) ಹಾಗೂ ಬಿಎನ್‌ಎಸ್-2023ರ ಕಲಂ 112 ಮತ್ತು 3(5)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


Spread the love
Subscribe
Notify of

0 Comments