ಮುಕ್ಕ | ಆಹಾರ ಸುರಕ್ಷತಾ ಅಧಿಕಾರಿ ತಂಡದಿಂದ ಆಸ್ಪತ್ರೆಯ ಕ್ಯಾಂಟೀನ್, ಹಾಸ್ಟೆಲ್ ಅಡುಗೆ ಕೋಣೆ ಪರಿಶೀಲನೆ
ಸುರತ್ಕಲ್: ಆರೋಗ್ಯ ಸಚಿವ ಯು ಟಿ ಖಾದರ್ ಅವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡ ಸೋಮವಾರ ಮುಕ್ಕ ಶ್ರೀನಿವಾಸ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಕ್ಯಾಂಟೀನ್ ಹಾಗೂ ಹಾಸ್ಟೆಲ್ ಅಡುಗೆ ಕೋಣೆಗೆ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅಧಿಕಾರಿಗಳ ತಂಡವು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಕ್ಯಾಂಟೀನ್ ಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಪರಿಶೀಲಿಸಿತು.
ಆಹಾರ ಸಿದ್ಧಪಡಿಸಲು ಬಳಸಲಾಗುವ ಸಾಮಗ್ರಿಗಳ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರಿಶೀಲನೆಗಾಗಿ ಆಹಾರ ಪ್ರಯೋಗ ಶಾಲೆಗಳಿಗೆ ಕಳಿಸಿಕೊಟ್ಟಿತು. ಆಹಾರ ತಯಾರಿಸಲು ಬಳಸುವ ನೀರಿನ ಮಾದರಿಯನ್ನು ಪ್ರಯೋಗ ಶಾಲೆಗೆ ಪರೀಕ್ಷೆಗೆ ಕಳುಹಿಸಿತು. ರೋಗಿಗಳಿಗೆ ನೀಡುವ ಆಹಾರಗಳನ್ನು ಉತ್ತಮ ಗುಣಮಟ್ಟದಿಂದ ಹಾಗೂ ಸುರಕ್ಷಿತವಾಗಿ ತಯಾರಿಸಿ ನೀಡಲು ಕಟ್ಟು ನಿಟ್ಟಿನ ಸೂಚನೆ ನೀಡಿತು.
ಆಹಾರ ತಯಾರಿಸುವ ಹಾಗೂ ಸರಬರಾಜು ಮಾಡುವ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡು ವಂತೆ ಹಾಗೂ ನಿಯಮಿತವಾಗಿ ಅವರ ಆರೋಗ್ಯ ತಪಾಸಣೆ ನಡೆಸಿ ದೃಢೀಕರಣ ಪತ್ರಗಳನ್ನು ಸಲ್ಲಿಸುವಂತೆ ಸೂಚಿಸಿದ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಿತು.













