ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ನ್ಯಾಯಾಲಯಕ್ಕೆ ಶರಣು

Spread the love

ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ನ್ಯಾಯಾಲಯಕ್ಕೆ ಶರಣು

ಕಡಬ: ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ವಿಶಾಲ್ ಪೊಂಕೆ (30) ಅಕ್ಟೋಬರ್ 30ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದೊಡ್ಡಬಳ್ಳಾಪುರದ ನರಸಿಂಹ ಅಲಿಯಾಸ್ ರಾಜು, ಮಹಾರಾಷ್ಟ್ರದ ವಿಜಯ್ ಸುರೇಶ್ ಪೊಂಕೆ, ನವೀನ್ ಚಂದ್ರ ಸಿಂಗ್, ಉತ್ತರ ಕನ್ನಡದ ಚಂದ್ರಕಾಂತ್ ಪೂಜಾರಿ ಹಾಗೂ ಮಂಡ್ಯದ ಪ್ರಕಾಶ್ ಬಹದ್ದೂರ್ ಅವರಿಗೆ ಈಗಾಗಲೇ ಪುತ್ತೂರಿನ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ವಿಶಾಲ್ ಪೊಂಕೆ ಮಾತ್ರ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ಆರೋಪಿಯ ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸಿದ್ದು, ಆತನ ವಿರುದ್ಧ ನ್ಯಾಯಾಲಯದಿಂದ ಪ್ರೊಕ್ಲಮೇಷನ್ ಆದೇಶ ಹೊರಡಿಸಲಾಗಿತ್ತು. ಇದೀಗ ಅಕ್ಟೋಬರ್ 30ರಂದು ನ್ಯಾಯಾಲಯಕ್ಕೆ ಹಾಜರಾದ ಆತನನ್ನು ಪುತ್ತೂರಿನ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ (ಸಂಚಾರಿ ನ್ಯಾಯಾಲಯ, ಕಡಬ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಿಶಾಲ್ ಪೊಂಕೆ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಎಂಒಬಿ ತೆರೆಯಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 105/2016ರಂತೆ ಐಪಿಸಿ ಕಲಂ 457 ಮತ್ತು 380ರ ಅಡಿಯಲ್ಲಿ ಮತ್ತೊಂದು ಪ್ರಕರಣವೂ ದಾಖಲಾಗಿದ್ದು, ವಿಚಾರಣೆಯಲ್ಲಿದೆ.


Spread the love
Subscribe
Notify of

0 Comments