ಅ. 21ರಂದು ಉಚ್ಚಿಲ ದಸರಾ ಶೋಭಾಯಾತ್ರೆಗೆ ಸಕಲ ಸಿದ್ಧತೆ ಪೂರ್ಣ: 2 ಲಕ್ಷಕ್ಕೂ ಅಧಿಕ ಭಕ್ತರ ನಿರೀಕ್ಷೆ
ಉಡುಪಿ: ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ-2026 ಮಹೋತ್ಸವದ ಅಂತಿಮ ಹಂತ ತಲುಪಿದ್ದು, ವಿಜಯದಶಮಿಯ ಶುಭದಿನವಾದ ಅಕ್ಟೋಬರ್ 21ರಂದು ನಡೆಯಲಿರುವ ವಿಶ್ವಪ್ರಸಿದ್ಧ ಉಚ್ಚಿಲ ದಸರಾ ಶೋಭಾಯಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಶೋಭಾಯಾತ್ರೆಯಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಮೆರವಣಿಗೆಯನ್ನು ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಸಂಘಟಕರು ಸಿದ್ಧತೆ ಮಾಡಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವವು ಐದನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ನಾಲ್ಕು ವರ್ಷಗಳ ಯಶಸ್ವಿ ಅನುಭವದ ಆಧಾರದಲ್ಲಿ ಈ ಬಾರಿಯ ಶೋಭಾಯಾತ್ರೆಯನ್ನು ವಿಭಿನ್ನವಾಗಿ ಆಯೋಜಿಸಲು ಮಹಾಜನ ಸಂಘ, ದಸರಾ ಸಮಿತಿ, ಮೊಗವೀರ ಸಮಾಜದ ಗ್ರಾಮಸಭೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಯೋಜನೆ ರೂಪಿಸಲಾಗಿದೆ.
ಶೋಭಾಯಾತ್ರೆಯ ಸುಗಮ ನಿರ್ವಹಣೆ ಮತ್ತು ಸಂಚಾರ ವ್ಯವಸ್ಥೆ ಕುರಿತು ಭಾನುವಾರ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಲಾಗಿದೆ. ಪೊಲೀಸರು ಮೆರವಣಿಗೆ ಸಾಗುವ ಮಾರ್ಗವನ್ನು ಪರಿಶೀಲಿಸಿ, ಅಗತ್ಯ ಸ್ಥಳಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲು ನಿರ್ಧರಿಸಿದ್ದಾರೆ. ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್, ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕಾಪು ಪೊಲೀಸ್ ನಿರೀಕ್ಷಕ ಅಜ್ಜತ್ ಆಲಿ ಹಾಗೂ ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ.
ಮಧ್ಯಾಹ್ನ 3.30ಕ್ಕೆ ಶೋಭಾಯಾತ್ರೆಗೆ ಚಾಲನೆ
ಅಕ್ಟೋಬರ್ 21ರಂದು ಮಧ್ಯಾಹ್ನ 2.30ಕ್ಕೆ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳಿಗೆ ವಿಸರ್ಜನಾ ಪೂಜೆ ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ವಿಗ್ರಹಗಳನ್ನು ವಾಹನಗಳಿಗೆ ಸ್ಥಳಾಂತರಿಸಿ, 3.30ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ನಿಗದಿತ ಸಮಯದೊಳಗೆ ಶೋಭಾಯಾತ್ರೆ ಹಾಗೂ ವಿಸರ್ಜನಾ ಕಾರ್ಯಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ.
ಮೊದಲ ಉಚ್ಚಿಲ ದಸರಾ ಮಹೋತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಸಲಾಗಿತ್ತು. ಈ ಬಾರಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳ ಮೇಲೆ ಡ್ರೋನ್ ಮೂಲಕ ಪುಷ್ಪವೃಷ್ಟಿ ಮಾಡುವ ವಿಶೇಷ ವ್ಯವಸ್ಥೆ ಮಾಡಲಾಗಿದೆ.
100ಕ್ಕೂ ಅಧಿಕ ವಾಹನಗಳ ಆಕರ್ಷಕ ಮೆರವಣಿಗೆ
ಶೋಭಾಯಾತ್ರೆಯಲ್ಲಿ 100ಕ್ಕೂ ಅಧಿಕ ವಾಹನಗಳು ಭಾಗವಹಿಸಲಿದ್ದು, ತುಳುನಾಡಿನ ಸಂಸ್ಕೃತಿ, ಮೀನುಗಾರಿಕೆ ಹಾಗೂ ಮೊಗವೀರ ಸಮಾಜದ ಪರಂಪರೆಯನ್ನು ಬಿಂಬಿಸುವ ವೈವಿಧ್ಯಮಯ ಟ್ಯಾಬ್ಲೊಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿವೆ.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಬೆಣ್ಣೆಕುದ್ರು ದೇವಸ್ಥಾನ, ಶ್ರೀ ಮಹಾಲಕ್ಷ್ಮೀ ದೇವಿ, ಮೊಗವೀರ ಸಮಾಜದ ಕುಲಗುರು ಮಾಧವ ಮಂಗಳ ಪೂಜಾರ್ಯ ಹಾಗೂ ಸದಿಯ ಸಾಹುಕಾರರ ಪರಂಪರೆಯನ್ನು ಬಿಂಬಿಸುವ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಕೊಂಬು, ವಾದ್ಯ, ಕಹಳೆ, ಡಿಜೆ ಸಂಗೀತ ಹಾಗೂ ವಿವಿಧ ಜಾನಪದ ಕಲಾಪ್ರದರ್ಶನಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ.
ಶೋಭಾಯಾತ್ರೆಯು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66ರ ಪೂರ್ವಭಾಗದಲ್ಲಿ ದಕ್ಷಿಣದತ್ತ ಸಾಗಲಿದೆ. ಎರ್ಮಾಳು ಮಸೀದಿ ಸಮೀಪ ಯು-ಟರ್ನ್ ಪಡೆದು ಉಚ್ಚಿಲ, ಮೂಳೂರು ಮೂಲಕ ಕಾಪುವಿನತ್ತ ಸಾಗಲಿದೆ. ಬಳಿಕ ಕಾಪು-ಕೊಪ್ಪಲಂಗಡಿ ಬಳಿ ಹೆದ್ದಾರಿಯಿಂದ ಬೀಚ್ ರಸ್ತೆಗೆ ತಿರುಗಿ ಕಾಪು ಬೀಚ್ ತಲುಪಲಿದೆ.
ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳ ಟ್ಯಾಬ್ಲೊಗಳು ಮಾತ್ರ ಬೀಚ್ ರಸ್ತೆಯ ಮೂಲಕ ಸಾಗಲಿದ್ದು, ಉಳಿದ ಟ್ಯಾಬ್ಲೊಗಳು ಕೊಪ್ಪಲಂಗಡಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮುಂದುವರಿದು ತಮ್ಮ ನಿಗದಿತ ಸ್ಥಳಗಳಿಗೆ ಮರಳಲಿವೆ.
ಶೋಭಾಯಾತ್ರೆಯೊಂದಿಗೆ ಕುಡಿಯುವ ನೀರಿನ ಐದು ವಾಹನಗಳು ಹಾಗೂ ಸ್ವಚ್ಛತೆಗಾಗಿ ಐದು ವಾಹನಗಳು ಸಂಚರಿಸಲಿವೆ. ಮಾರ್ಗದುದ್ದಕ್ಕೂ ಭಕ್ತರಿಗೆ ಪಾನೀಯ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾಪು ಬೀಚ್ನಲ್ಲಿ ಗಂಗಾರತಿ, ಲೇಸರ್ ಪ್ರದರ್ಶನ
ಕಾಪು ದೀಪಸ್ತಂಭದ ಸಮೀಪದ ಬೀಚ್ನಲ್ಲಿ ಕಾಶಿಯ ಪಂಡಿತರಿಂದ ಗಂಗಾರತಿ ಹಾಗೂ ಸಮುದ್ರಾರತಿ ನಡೆಯಲಿದೆ. ಸುಮಂಗಲೆಯರಿಂದ ಸಾಮೂಹಿಕ ಆರತಿ ನೆರವೇರಲಿದ್ದು, ಸಮುದ್ರದ ಮಧ್ಯೆ 50ಕ್ಕೂ ಅಧಿಕ ವಿದ್ಯುದ್ದೀಪಾಲಂಕೃತ ಬೋಟ್ಗಳಿಂದ ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ಹಾಗೂ ಸಂಗೀತ ರಸಮಂಜರಿ ಆಯೋಜಿಸಲಾಗಿದೆ. ಈ ಮೂಲಕ ಉಚ್ಚಿಲ ದಸರಾ ಶೋಭಾಯಾತ್ರೆಯು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕ ವೈಭವದೊಂದಿಗೆ ಸಂಪನ್ನಗೊಳ್ಳಲಿದೆ.
ದಸರಾ ಮಹೋತ್ಸವದ ರೂವಾರಿ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಮಾತನಾಡಿ, “ಶ್ರೀ ಮಹಾಲಕ್ಷ್ಮೀ ದೇವಿಯ ಕೃಪೆಯಿಂದ 11 ದಿನಗಳ ಐತಿಹಾಸಿಕ ಉಡುಪಿ ಉಚ್ಚಿಲ ದಸರಾ ಮಹೋತ್ಸವ ಸುಸೂತ್ರವಾಗಿ ನಡೆಯುತ್ತಿದೆ. ವಿಶ್ವಪ್ರಸಿದ್ಧ ಶೋಭಾಯಾತ್ರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿಗದಿತ ಸಮಯದೊಳಗೆ ಶೋಭಾಯಾತ್ರೆ ಹಾಗೂ ವಿಸರ್ಜನಾ ಕಾರ್ಯಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ” ಎಂದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, “ಪಂಚಮ ವರ್ಷದ ಶೋಭಾಯಾತ್ರೆಯನ್ನು ಈ ಬಾರಿ ವಿಭಿನ್ನವಾಗಿ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಯಂಸೇವಕರು ಹಗಲಿರುಳು ಶ್ರಮಿಸುತ್ತಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ ಮಾತನಾಡಿ, “ಶಿಸ್ತುಬದ್ಧ ಹಾಗೂ ಅಚ್ಚುಕಟ್ಟಾದ ಶೋಭಾಯಾತ್ರೆಗಾಗಿ ಕನಿಷ್ಠ 250 ಸ್ವಯಂಸೇವಕರು ಕಾರ್ಯನಿರ್ವಹಿಸಿದ್ದಾರೆ. ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೋಭಾಯಾತ್ರೆಯ ಸಂದರ್ಭದಲ್ಲಿ ಯಾವುದೇ ಕುಂದುಕೊರತೆ ಉಂಟಾಗದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ” ಎಂದರು.
ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ
ಶೋಭಾಯಾತ್ರೆ ಹಾಗೂ ವಿಗ್ರಹ ವಿಸರ್ಜನೆ ಹಿನ್ನೆಲೆಯಲ್ಲಿ ಭಕ್ತರು ವಾಹನ ನಿಲುಗಡೆಗೆ ಸಂಘಟಕರು ಸೂಚಿಸಿರುವ ಸ್ಥಳಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.
ಉಡುಪಿ ಕಡೆಯಿಂದ ಬರುವ ವಾಹನಗಳನ್ನು ಉಚ್ಚಿಲ ಭಾಗದ ಶಾಲಾ ಮೈದಾನದಲ್ಲಿ ನಿಲುಗಡೆ ಮಾಡಬೇಕು. ಮಂಗಳೂರು ಹಾಗೂ ಉಚ್ಚಿಲ ಕಡೆಯಿಂದ ಬರುವ ವಾಹನಗಳಿಗೆ ಕಾಪು ಮಂಥನ್ ರೆಸಾರ್ಟ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಹಾಗೂ ಮೂಳೂರು ಸಾಯಿರಾಧಾ ರೆಸಾರ್ಟ್ ಸಮೀಪ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಶೋಭಾಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆ ಹಾಗೂ ಸ್ವಯಂಸೇವಕರ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಮನವಿ ಮಾಡಲಾಗಿದೆ.













