ಸೌತಡ್ಕ ದೇವಸ್ಥಾನಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ: ದೂರು ದಾಖಲು
ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನದ ಸಮೀಪ ದೇವಸ್ಥಾನಕ್ಕಾಗಿ ಕಾಯ್ದಿರಿಸಲಾದ ಜಮೀನಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಿರುವ ಆರೋಪದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೌತಡ್ಕ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿ ಸುಬ್ರಹ್ಮಣ್ಯ ಶಬರಾಯ ಅವರು ನೀಡಿದ ದೂರಿನಂತೆ, ದೇವಸ್ಥಾನದ ಮಾಜಿ ಪದಾಧಿಕಾರಿ ಹಾಗೂ ಕೊಕ್ಕಡ ನಿವಾಸಿ ಕೃಷ್ಣ ಭಟ್ ಅವರು ದೇವಸ್ಥಾನಕ್ಕಾಗಿ ಕಾಯ್ದಿರಿಸಲಾದ ಜಮೀನಿನಲ್ಲಿ ಅಗತ್ಯ ಅನುಮತಿಗಳನ್ನು ಪಡೆಯದೆ ಮತ್ತು ಅಧಿಕೃತ ದಾಖಲೆಗಳಿಲ್ಲದೆ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದರಿ ಕಟ್ಟಡದಲ್ಲಿ ಬಾಡಿಗೆಗೆ ಅಂಗಡಿ ಪಡೆದವರಿಂದಾಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಅಕ್ಟೋಬರ್ 19, 2026ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರರ್ಜಿ ಸಂಖ್ಯೆ 354/2026ರಂತೆ ದೂರು ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.













