ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪವಿತ್ರ ಪರಮ ಪ್ರಸಾದದ ಮೆರವಣಿಗೆ
ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪವಿತ್ರ ಪರಮ ಪ್ರಸಾದದೊಂದಿಗೆ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಭಕ್ತಿ ಪೂರಕವಾಗಿ ಭಾನುವಾರ ನಡೆಯಿತು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ವಿಶೇಷ ಬಲಿಪೂಜೆಯ ನೇತೃತ್ವವನ್ನು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ. ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ವಹಿಸಿದ್ದರು. ಬಲಿ ಪೂಜೆಯ ಬಳಿಕ ಮಿಲಾಗ್ರಿಸ್ ಕ್ಯಾಥೆಡ್ರಲ್ ನಿಂದ ಆರಂಭಿಸಿ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ವರೆಗೆ ಪವಿತ್ರ ಪರಮ ಪ್ರಸಾದವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಸಾರ್ವಜನಿಕ ಗೌರವ ಸಲ್ಲಿಸಲಾಯಿತು.

ಮೂರು ಸಾವಿರಕ್ಕೂ ಅಧಿಕ ಕ್ರೈಸ್ತ ವಿಶ್ವಾಸಿಗಳು ಸೇರಿದಂತೆ 70ಕ್ಕೂ ಅಧಿಕ ಧರ್ಮಗುರುಗಳು, 200ಕ್ಕೂ ಅಧಿಕ ಧರ್ಮ ಭಗಿನಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿಶೇಷ ಅಲಂಕೃತ ವಾಹನದಲ್ಲಿ ಪವಿತ್ರ ಪರಮ ಪ್ರಸಾದವನ್ನು ಹಿಡಿದುಕೊಂಡು ಧರ್ಮಾಧ್ಯಕ್ಷರಾದ ಅತಿ. ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಸಾಗಿದರು.
ಪ್ರವಚನ ನೀಡಿದ ಧರ್ಮಾಧ್ಯಕ್ಷರಾದ ಅತಿ. ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹಸಿದವರಿಗೆ ಅನ್ನ ನೀಡುವುದು, ನೊಂದವರಿಗೆ ಸಾಂತ್ವನ ಹೇಳುವುದು ಕೇವಲ ಸಹಾಯವಲ್ಲ, ಅದು ನೇರವಾಗಿ ದೇವರಿಗೆ ಸಲ್ಲಿಸುವ ಪೂಜೆಯಾಗಿದೆ. ಕಷ್ಟದಲ್ಲಿರುವವರಿಗೆ ದಯೆ ತೋರದಿದ್ದರೆ ನಾವು ಮಾಡುವ ಯಾವುದೇ ಪೂಜೆ, ಪುನಸ್ಕಾರಗಳಿಗೆ ಅರ್ಥವಿರುವುದಿಲ್ಲ. ಅಸಹಾಯಕರ ಕಣ್ಣೀರು ಒರೆಸುವುದರಿಂದ ಸಿಗುವ ಆತ್ಮತೃಪ್ತಿ ಮತ್ತು ದೇವರ ಆಶೀರ್ವಾದ ಎಂದಿಗೂ ಶಾಶ್ವತವಾಗಿರುತ್ತದೆ. ಪರಮ ಪವಿತ್ರ ಪ್ರಸಾದದಲ್ಲಿ ನಾವು ಜಗತ್ತಿನ ಜ್ಯೋತಿಯಾಗಲು ಶಕ್ತಿಯನ್ನು ಪಡೆಯುತ್ತೇವೆ. ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಕ್ರಿಸ್ತನ ಪ್ರೀತಿಯನ್ನು ಪ್ರತಿಬಿಂಬಿಸಲು ನಮಗೆ ಪ್ರೇರಣೆ ಸಿಗುತ್ತದೆ ಎಂದರು.
ಪ್ರೀತಿ ಮತ್ತು ಸೇವೆ ಕ್ರೆಸ್ತ ಧರ್ಮದ ಮೂಲ ತತ್ತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು. ನಮ್ಮ ಜೀವನದಲ್ಲಿ ಕ್ಷಮೆ ಪ್ರಿತಿ, ಸೇವೆಯ ಮೂಲಕ ದೈವ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಪಣತೊಡು ವಂತಾಗ ಬೇಕು ಎಂದು ಧರ್ಮಾಧ್ಯಕ್ಷರು ಕರೆ ನೀಡಿದರು.
ಪರಮಪ್ರಸಾದ ಮೆರವಣಿಗೆ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿಗೆ ತಲುಪಿದ ಬಳಿಕ ಪವಿತ್ರ ಬೈಬಲ್ ವಾಚನದ ಮೂಲಕ ಪ್ರವಚನ ನೀಡಿದ ಪಾಂಬೂರು ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ವಂ. ಡಾ. ರೋಶನ್ ಡಿಸೋಜಾ ಪರಮ ಪ್ರಸಾದ ಮೆರವಣಿಗೆಯ ಧ್ಯೇಯವಾಕ್ಯದಂತೆ ಪರಮ ಪ್ರಸಾದ ಬಲಿಪೂಜೆ ಅರ್ಪಿಸೋಣ ಕ್ರಿಸ್ತರಂತೆ ಆಗೋಣ ಎಂಬ ಸಂದೇಶದಂತೆ ನಮ್ಮ ಜೀವನದಲ್ಲಿ ಕ್ರಿಸ್ತರಂತೆ ಬಾಳಿದರೆ ನಾವು ಅರ್ಪಿಸುವ ಪರಮಪ್ರಸಾದ ಬಲಿಪೂಜೆಗೆ ನಿಜವಾದ ಅರ್ಥ ಬರುತ್ತದೆ. ಇತರರಿಗೆ ಸಹಾಯ ಮಾಡಿ ಅವರ ಅಗತ್ಯಗಳಿಗೆ ಸ್ಪಂದಿಸಿ, ಇತರರೊಡನೆ ಶಾಂತಿ ಸಮಾಧಾನದಿಂದ ಜೀವಿಸಿ ಪರರನ್ನು ಕ್ಷಮಿಸಿದಾಗ ದೇವರ ಕೃಪಾವರಗಳು ನಮ್ಮ ಮೇಲೆ ಇರಲು ಸಾಧ್ಯವಿದೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಲೂವಿಸ್, ಸಹಾಯಕ ಧರ್ಮಗುರು ವಂ, ಕೆವಿನ್ ಡಿಸೋಜಾ, ಕುಲಪತಿ ವಂ. ಸ್ಟೀವನ್ ಡಿಸೋಜಾ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ. ಚಾರ್ಲ್ಸ್ ಮಿನೇಜಸ್, ವಂ. ಆಲ್ಬನ್ ಡಿಸೋಜಾ, ವಂ|ಡೆನಿಸ್ ಡೆಸಾ, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ. ರೋಕ್ ಡೇಸಾ, ಸಹಾಯಕ ಧರ್ಮಗುರು ವಂ|ರೋಹನ್ ಮಸ್ಕರೇನ್ಹಸ್, ಧಾರ್ಮಿಕ ಸಭೆಗಳ ಎಪಿಸ್ಕೋಪಲ್ ವಿಕಾರ್ ವಂ. ಜ್ಯೋ ತಾವ್ರೊ ಉಪಸ್ಥಿತರಿದ್ದರು.
ವಂ|ವಿಲ್ಸನ್ ಡಿಸೋಜಾ ಧಾರ್ಮಿಕ ವಿಧಿಯ ಕಾರ್ಯಕ್ರಮ ನಿರೂಪಿಸಿದರು. ವಂ. ಶೋನ್ ಸಾವಿಯೊ ಅಂದ್ರಾದೆ ಜಪಸರ ಪ್ರಾರ್ಥನೆ ನೆರವೇರಿಸಿದರು.












