ವೆನ್ಲಾಕ್ ಆಸ್ಪತ್ರೆಗೆ 400 ಹಾಸಿಗೆ ಹೆಚ್ಚಳಕ್ಕೆ ಅನುಮೋದನೆ
ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಾಮರ್ಥ್ಯವನ್ನು 400 ಹಾಸಿಗೆಗಳಷ್ಟು ಹೆಚ್ಚಿಸಲು ಆರ್ಥಿಕ ಇಲಾಖೆಯು ಅನುಮೋದನೆ ನೀಡಿದೆ.
ಪ್ರಾಸ್ತಾವಿತ ಯೋಜನೆಯಂತೆ 200 ಹಾಸಿಗೆಗಳನ್ನು ಮೊದಲ ಹಂತದಲ್ಲಿ ಹಾಗೂ 200 ಹಾಸಿಗೆಗಳನ್ನು ಎರಡನೇ ಹಂತದಲ್ಲಿ ಮಾಡಲಾಗುತ್ತದೆ. ಹಾಲಿ ಕಟ್ಟಡದಲ್ಲಿ ಅಗತ್ಯ ಮಾರ್ಪಾಡು, ಉಪಕರಣ ಮತ್ತು ಮೂಲಸೌಕರ್ಯ ಕಲ್ಪಿಸಿ ಹೆಚ್ಚುವರಿ ಹಾಸಿಗೆಗಳನ್ನು ಬಳಕೆಗೆ ತರಲಾಗುತ್ತದೆ. ಇದರಿಂದ ಆಸ್ಪತ್ರೆಯ ಚಿಕಿತ್ಸಾ ಸಾಮರ್ಥ್ಯ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಹೊಸ ಕಟ್ಟಡದಲ್ಲಿ ಉನ್ನತ ಚಿಕಿತ್ಸಾ ವಿಭಾಗಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ಸ್, ಡರ್ಮಟಾಲಜಿ, ನೇತ್ರ, ಜನರಲ್ ಮೆಡಿಸಿನ್ ಜೊತೆಗೆ ಯುರಾಲಜಿ, ಕಾರ್ಡಿಯಾಕ್ ಕ್ಯಾಥ್‌ಲ್ಯಾಬ್, ಪೀಡಿಯಾಟ್ರಿಕ್ ಸರ್ಜರಿ, ಡಿಆರ್‌ಟಿಬಿ, ನ್ಯೂರೋ ಸರ್ಜರಿ, ನ್ಯೂರಾಲಜಿ, ನೆಫ್ರಾಲಜಿ ಹಾಗೂ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೇವೆಗಳನ್ನು ಬಲಪಡಿಸುವ ಯೋಜನೆಯೂ ಇದೆ. ವೈದ್ಯಕೀಯ ಉಪಕರಣ, ಸಿಬ್ಬಂದಿ ಮತ್ತು ಮೂಲಸೌಕರ್ಯಕ್ಕೆ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿತ್ತು. ಸೆ.18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದ ತೀರ್ಮಾನಗಳಲ್ಲಿ ವೆನ್ಲಾಕ್‌ನಲ್ಲಿ ಬೆಡ್‌ಗಳ ಹೆಚ್ಚಳದ ಪ್ರಸ್ತಾಪವಿತ್ತು. ಈಗ ಅದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.













