ಬಾಹುಬಲಿ ಮಹಾಮಸ್ತಕಾಭಿಷೇಕ ರಾಜ್ಯದ ಕಾರ್ಯಕ್ರಮ: ಸಚಿವ ರಿಜ್ವಾನ್ ಅರ್ಷದ್

Spread the love

ಬಾಹುಬಲಿ ಮಹಾಮಸ್ತಕಾಭಿಷೇಕ ರಾಜ್ಯದ ಕಾರ್ಯಕ್ರಮ: ಸಚಿವ ರಿಜ್ವಾನ್ ಅರ್ಷದ್

ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಅತ್ಯಂತ ಪವಿತ್ರವಾದ ಕಾರ್ಯಕ್ರಮವಾಗಿದ್ದು, ಇದು ನನ್ನ ಪಾಲಿಗೆ ಪುಣ್ಯದ ಕಾರ್ಯವಾಗಿದೆ. ಈ ಮಹೋತ್ಸವವನ್ನು ರಾಜ್ಯದ ಕಾರ್ಯ ಕ್ರಮವಾಗಿ ಪರಿಗಣಿಸಿ, ಸರಕಾರದ ವತಿಯಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಹೇಳಿದರು.

ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ವತಿಯಿಂದ ಕಾರ್ಕಳ ದಾನಶಾಲೆ ಬಳಿಯ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಹುತ್ವ, ಸಹಿಷ್ಣುತೆ ಮತ್ತು ಸಾಮರಸ್ಯವನ್ನು ಸಾರುವ ಐತಿಹಾಸಿಕ ಕಾರ್ಯಕ್ರಮ ಇದಾಗಿದೆ. ಎಲ್ಲರೂ ಒಂದೇ ತಾಯಿಯ ಮಕ್ಕಳೆಂಬ ಭಾವನೆಯೊಂದಿಗೆ ಸಮಾನವಾಗಿ ಬದುಕಬೇಕು ಎಂಬುದು ನಮ್ಮ ಪಕ್ಷದ ಸಿದ್ಧಾಂತ. ಜೈನ ಸಮಾಜದ ಏಳಿಗೆಗೆ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿದ ಮಹನೀಯರನ್ನು ಸ್ಮರಿಸುವ ಮಹತ್ವದ ಕಾರ್ಯ ಇದಾಗಿದೆ ಎಂದರು.

ಮಹೋತ್ಸವ ಯಾವುದೇ ಅಪಪ್ರಚಾರಕ್ಕೆ ಅವಕಾಶವಾಗದಂತೆ, ಅತ್ಯಂತ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಸಮಿತಿ ಮತ್ತು ಜಿಲ್ಲಾಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸರಕಾರದ ಪೂರ್ವಸಿದ್ಧತೆ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರಕಾರ ನಿಮ್ಮೊಂದಿಗಿದೆ. ಬದ್ಧತೆಯಿಂದ ಈ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮಹಾಮಸ್ತಕಾಭಿಷೇಕ ಬಹುವೈಭವದಿಂದ ನಡೆಯುವ ಕಾರ್ಯ ಕ್ರಮವಾಗಿದ್ದು, ಅದೇ ವೈಭವ ಮುಂದುವರಿಯಬೇಕು. ಆಧುನಿಕ ಯುಗದಲ್ಲಿ ಮಹೋತ್ಸವಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರಕಾರದ ಅನುದಾನ ಮುಖ್ಯವಾಗಿದೆ. ರಸ್ತೆಗಳ ಅಭಿವೃದ್ಧಿ ಸೇರಿದಂತೆ ಕಾರ್ಕಳದ ಸಮಗ್ರ ಅಭಿವೃದ್ಧಿಗೆ ಈ ಮಹೋತ್ಸವ ಅವಕಾಶ ಕಲ್ಪಿಸಬೇಕು. ಸರಕಾರದ ಮೇಲೆ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಊರಿನ ಉತ್ಸವಕ್ಕೆ ಈ ಹಿಂದೆ ರೂ.10 ಕೋಟಿ ಅನುದಾನ ನೀಡಲಾಗಿತ್ತು. ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕಾರ್ಕಳಕ್ಕೆ ತುರ್ತು ಅನುದಾನ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಮಹೋತ್ಸವದ ಸಿದ್ಧತೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಮುನಿರಾಜ ರೆಂಜಾಳ, ಅಟ್ಟಳಿಗೆ ನಿರ್ಮಾಣಕ್ಕೆ ಸರಕಾರದಿಂದ ರೂ.1.59 ಕೋಟಿ ಅನುದಾನ ಬಿಡುಗಡೆಯಾಗಿದೆ. ಸುಮಾರು ರೂ.70 ಕೋಟಿ ಅನುದಾನದ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದೆ. ಮಹೋತ್ಸವವನ್ನು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಮಾತ್ರವಲ್ಲದೆ, ಕಾರ್ಕಳದ ಅಭಿವೃದ್ಧಿಯ ಸಂಭ್ರಮವಾಗಿಯೂ ರೂಪಿಸ ಬೇಕಿದೆ. ಕಾರ್ಕಳದ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ 595 ವರ್ಷಗಳ ಐತಿಹಾಸಿಕ ಹಿನ್ನೆಲೆಯಿದೆ ಎಂದರು.

ಸಮಿತಿಯ ಉಪಾಧ್ಯಕ್ಷರಾದ ಅನಂತರಾಜ ಪುವಾಣಿ, ಕೋಶಾಧಿಕಾರಿ ಎ. ಮೋಹನ್ ಪಡಿವಾಳ್, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮೊದಲಾದವರು ಉಪಸ್ಥಿತರಿದ್ದರು. ಕೋಶಾಧಿಕಾರಿ ಎ. ಮೋಹನ್ ಪಡಿವಾಳ್ ವಂದಿಸಿದರು.


Spread the love
Subscribe
Notify of

0 Comments