ಬಾಲ್ಕನಿಯ ತಡೆಗೋಡೆ ಕುಸಿತ: ಓರ್ವ ವಿದ್ಯಾರ್ಥಿ ಮೃತ್ಯು : ಸಂಘಟಕರು, ಕಟ್ಟಡ ಮಾಲಕರ ವಿರುದ್ಧ ಪ್ರಕರಣ ದಾಖಲು

Spread the love

ಬಾಲ್ಕನಿಯ ತಡೆಗೋಡೆ ಕುಸಿತ: ಓರ್ವ ವಿದ್ಯಾರ್ಥಿ ಮೃತ್ಯು : ಸಂಘಟಕರು, ಕಟ್ಟಡ ಮಾಲಕರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ನನ್ ಹಾಲ್ನಲ್ಲಿ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಶಮ್ಮಾಝ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕಟ್ಟಡದ ಮಾಲಕ ಪರಿಕ್ಷಿತ್ ರೈ ಹಾಗೂ ಕಾರ್ಯಕ್ರಮದ ಸಂಘಟಕ ದಿನಕರ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರ ಹುದ್ದೆಗಳ ಆಯ್ಕೆ ಕುರಿತ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಹಾಲ್ಗೆ ಆಗಮಿಸಿದ್ದರು. ಮಧ್ಯಾಹ್ನ ಸುಮಾರು 2.50ರ ವೇಳೆಗೆ ಹಾಲ್ನ ಮೊದಲ ಮಹಡಿಯ ಪ್ಯಾಸೇಜ್ನಲ್ಲಿ ವಿದ್ಯಾರ್ಥಿಗಳು ಗುಂಪಾಗಿ ರ್ಯಾಲಿಯನ್ನು ವೀಕ್ಷಿಸುತ್ತಿದ್ದ ಸಂದರ್ಭ ತಡೆಗೋಡೆ ಏಕಾಏಕಿ ಕುಸಿದು ಕೆಳಗೆ ನಿಂತಿದ್ದ ಶಮ್ಮಾಸ್ ಮೇಲೆ ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯಲ್ಲಿ ಶಮ್ಮಾಸ್ ತಲೆ, ಎರಡೂ ಕಾಲು ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಮೊಹಮ್ಮದ್ ಸನಾನ್ ಅಹ್ಮದ್, ಮೊಹಮ್ಮದ್ ಹನೀಫ್ ಹಾಗೂ ದಾವೂದ್ ಎಂಬ ವಿದ್ಯಾರ್ಥಿಗಳಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ವಿದ್ಯಾರ್ಥಿಗಳು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಶಮ್ಮಾಸ್ ಅವರನ್ನು ಐಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾವಸ್ಥೆಯಲ್ಲಿದ್ದ ಅವರು ರಾತ್ರಿ ಸುಮಾರು 11.33ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆಯಿದೆ ಎಂಬುದು ತಿಳಿದಿದ್ದರೂ ಕಟ್ಟಡದ ಮಾಲೀಕ ಪರೀಕ್ಷಿತ್ ರೈ ಅವರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಲಿದ್ದ ಕಾರ್ಯಕ್ರಮಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಅವಕಾಶ ನೀಡಿರುವುದಾಗಿ ಆರೋಪಿಸಲಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ದಿನಕರ್ ಶೆಟ್ಟಿ ಅವರಿಗೂ ಕಟ್ಟಡದ ಸ್ಥಿತಿಗತಿ ತಿಳಿದಿದ್ದರೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡದೆ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಈ ನಿರ್ಲಕ್ಷ್ಯದ ಪರಿಣಾಮವೇ ತಡೆಗೋಡೆ ಕುಸಿದು ವಿದ್ಯಾರ್ಥಿ ಶಮ್ಮಾಸ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಫಿರ್ಯಾದಿನಲ್ಲಿ ತಿಳಿಸಲಾಗಿದೆ.

ಬಾಲ್ಕನಿಯ ತಡೆಗೋಡೆ ಕುಸಿದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಮ್ಮಾಝ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.


Spread the love
Subscribe
Notify of

0 Comments