ಬಂಟ್ವಾಳ: ನಿಂತಿದ್ದ ಕಾರು, ಕ್ರೇನ್‌ಗೆ ಡಿಕ್ಕಿ ಹೊಡೆದ ಕಾರು- ಇಬ್ಬರು ಮೆಕ್ಯಾನಿಕ್‌ಗಳು ಸೇರಿ ಮೂವರಿಗೆ ಗಾಯ

Spread the love

ಬಂಟ್ವಾಳ: ನಿಂತಿದ್ದ ಕಾರು, ಕ್ರೇನ್‌ಗೆ ಡಿಕ್ಕಿ ಹೊಡೆದ ಕಾರು- ಇಬ್ಬರು ಮೆಕ್ಯಾನಿಕ್‌ಗಳು ಸೇರಿ ಮೂವರಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ದುರಸ್ತಿಗಾಗಿ ನಿಲ್ಲಿಸಿದ್ದ ಕ್ರೇನ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೆಕ್ಯಾನಿಕ್‌ಗಳು ಸೇರಿದಂತೆ ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡು–ಧರ್ಮಸ್ಥಳ ರಸ್ತೆಯ ಕಳ್ಳಿಮಾರ್‌ನಲ್ಲಿ ನಡೆದಿದೆ.

ಪುಂಜಾಲಕಟ್ಟೆ ನಿವಾಸಿ ಯು. ಮಹಮ್ಮದ್ ಅವರು ತಮ್ಮ ಮಗಳನ್ನು ಕಾರಿನಲ್ಲಿ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಕಳ್ಳಿಮಾರ್‌ನ ಇಂಜಿನಿಯರಿಂಗ್ ಶಾಪ್‌ವೊಂದರ ಮುಂಭಾಗ ಈ ಅಪಘಾತ ಸಂಭವಿಸಿದೆ.

ಘಟನಾ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಲಾಗಿತ್ತು. ಅದರ ಸಮೀಪವೇ ಕ್ರೇನ್‌ವೊಂದನ್ನು ದುರಸ್ತಿಗಾಗಿ ನಿಲ್ಲಿಸಲಾಗಿದ್ದು, ಮಾಧವ ಪಿಟ್ಟಿರ್ ಅವರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಪುನೀತ್ ಸಜೀಪ ಅವರು ಬೈಕ್‌ನಲ್ಲಿ ಕುಳಿತು ಮಾಧವ ಅವರೊಂದಿಗೆ ಮಾತನಾಡುತ್ತಿದ್ದರು ಎನ್ನಲಾಗಿದೆ.

YouTube player

ಈ ಸಂದರ್ಭ ಮಂಗಳೂರಿನತ್ತ ಸಂಚರಿಸುತ್ತಿದ್ದ ಮಹಮ್ಮದ್ ಅವರ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಕ್ರೇನ್‌ಗೆ ಅಪ್ಪಳಿಸಿದೆ. ಡಿಕ್ಕಿಯ ತೀವ್ರತೆಗೆ ನಿಲ್ಲಿಸಿದ್ದ ಕಾರು ಸುಮಾರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ. ಅದೃಷ್ಟವಶಾತ್ ಆ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.

ಅಪಘಾತದ ರಭಸಕ್ಕೆ ಕ್ರೇನ್ ದುರಸ್ತಿ ಮಾಡುತ್ತಿದ್ದ ಮಾಧವ ಪಿಟ್ಟಿರ್ ಹಾಗೂ ಬೈಕ್‌ನಲ್ಲಿದ್ದ ಪುನೀತ್ ಸಜೀಪ ಅವರು ವಾಹನಗಳ ನಡುವೆ ಸಿಲುಕಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹರಸಾಹಸಪಟ್ಟು ಇಬ್ಬರನ್ನೂ ಹೊರತೆಗೆದಿದ್ದಾರೆ.

ಅಪಘಾತದಲ್ಲಿ ಕಾರು ಚಾಲಕ ಯು. ಮಹಮ್ಮದ್ ಅವರಿಗೂ ಗಾಯಗಳಾಗಿದ್ದು, ಮೂವರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.

ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಿದರು. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love
Subscribe
Notify of

0 Comments