ಬಂಟ್ವಾಳ: ಹಣದ ವಿಚಾರವಾಗಿ ಯುವಕನಿಗೆ ಚೂರಿಯಿಂದ ಇರಿತ: ಆರೋಪಿ ವಶಕ್ಕೆ
ಬಂಟ್ವಾಳ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ಬಿ. ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ (28) ವಶಕ್ಕೆ ಪಡೆದ ಆರೋಪಿ.
ಪೊಲೀಸ್ ಮಾಹಿತಿ ಪ್ರಕಾರ, ಬಂಟ್ವಾಳ ಬಿ. ಮೂಡ ಗ್ರಾಮದ ಲೋಕೇಶ್ (27) ಅವರ ಸಹೋದರ ಉದಯ್ ಅವರಿಗೆ ಆರೋಪಿ ಅಜಿತ್ ಹಣ ನೀಡಬೇಕಿತ್ತು. ಉದಯ್ ಹಣವನ್ನು ವಾಪಸ್ ನೀಡುವಂತೆ ಕೇಳುತ್ತಿದ್ದರು. ಅಕ್ಟೋಬರ್ 17ರಂದು ರಾತ್ರಿ ಹಣ ಹಿಂದಿರುಗಿಸುವುದಾಗಿ ತಿಳಿಸಿದ ಆರೋಪಿ, ಉದಯ್ ಅವರನ್ನು ಪಲ್ಲಮಜಲಿಗೆ ಬರುವಂತೆ ಹೇಳಿದ್ದಾನೆ. ಅದರಂತೆ ಉದಯ್ ಹಣ ಪಡೆಯಲು ಪಲ್ಲಮಜಲು ಜಂಕ್ಷನ್ಗೆ ತೆರಳಿದ್ದು, ಲೋಕೇಶ್ ಅವರನ್ನೂ ಅಲ್ಲಿಗೆ ಬರುವಂತೆ ತಿಳಿಸಿದ್ದರು.
ಲೋಕೇಶ್ ಸ್ಥಳಕ್ಕೆ ತಲುಪಿದಾಗ ಆರೋಪಿ ಅಜಿತ್ ತನ್ನ ಸಹೋದರ ಉದಯ್ ಅವರಿಗೆ ಚೂರಿಯಿಂದ ಇರಿಯುತ್ತಿರುವುದನ್ನು ಕಂಡಿದ್ದಾರೆ. ಇದನ್ನು ತಡೆಯಲು ಮುಂದಾದಾಗ ಆರೋಪಿ ಲೋಕೇಶ್ ಅವರನ್ನೂ ಅಟ್ಟಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ.
ಬಳಿಕ ಸ್ಥಳೀಯರು ಗಾಯಗೊಂಡ ಉದಯ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಗಾಗಿ ಅಕ್ಟೋಬರ್ 18ರಂದು ಆರೋಪಿ ಅಜಿತ್ ಕುಮಾರ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.













