ಮಣಿಪಾಲದಲ್ಲಿ ಬೈಕ್ ಕಳವು ಪ್ರಕರಣ: ಬೆಂಗಳೂರು ಮೂಲದ ಆರೋಪಿ ಬಂಧನ
ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲುಗಡೆ ಮಾಡಿದ್ದ ಬೈಕ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿ, ಕಳವು ಮಾಡಿದ್ದ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರಿನ ಮಾರೆನಹಳ್ಳಿ ನಿವಾಸಿ ಅಂಬೂಜ ಅವರ ಪುತ್ರ ಮನೀಶ್ ಎ. ಎಂದು ಗುರುತಿಸಲಾಗಿದೆ. ಆರೋಪಿಯಿಂದ ಹೋಂಡಾ ಶೈನ್ ಮೋಟಾರ್ ಸೈಕಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಆರ್ಎಸ್ಬಿ ಸಭಾಭವನದ ಸಮೀಪ, ವೇಘಾ ಟ್ರಾನ್ಸ್ಪೋರ್ಟ್ಸ್ ಬಳಿ ಇರುವ ಶೆಡ್ನಲ್ಲಿ ಅಕ್ಟೋಬರ್ 20ರಂದು ಬೆಳಿಗ್ಗೆ 9.30ಕ್ಕೆ KA 20 EU 3431 ನೋಂದಣಿ ಸಂಖ್ಯೆಯ ಶೈನ್ ಬೈಕ್ನ್ನು ನಿಲ್ಲಿಸಿ ಅದರ ಮಾಲೀಕರು ಹುಬ್ಬಳ್ಳಿಗೆ ತೆರಳಿದ್ದರು. ಅಕ್ಟೋಬರ್ 22ರಂದು ರಾತ್ರಿ 9 ಗಂಟೆಗೆ ವಾಪಸಾಗಿ ನೋಡಿದಾಗ ಬೈಕ್ ಕಾಣೆಯಾಗಿತ್ತು. ಯಾರೋ ಕಳ್ಳರು ಬೈಕ್ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನವೆಂಬರ್ 18ರಂದು ಮಣಿಪಾಲ ಠಾಣೆಯ ಎಎಸ್ಐ ವಿವೇಕಾನಂದ, ಹೆಡ್ಕಾನ್ಸ್ಟೇಬಲ್ ಮಹಮ್ಮದ್ ಅಜ್ಮಲ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮಂಜುನಾಥ್ ಎಂ.ಆರ್. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಶಿವಳ್ಳಿ ಗ್ರಾಮದ ಮಣ್ಣಪಳ್ಳ ಕೆರೆ ರಸ್ತೆಯ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ತಡೆದು ವಿಚಾರಿಸಿದಾಗ ಆತ ತನ್ನ ಹೆಸರು ಮತ್ತು ವಿಳಾಸ ತಿಳಿಸಿದ್ದಾನೆ. ಬೈಕ್ ಪರಿಶೀಲಿಸಿದಾಗ ಅದು ಕಳವಾದ KA 20 EU 3431 ನೋಂದಣಿ ಸಂಖ್ಯೆಯ ಶೈನ್ ಬೈಕ್ ಎಂಬುದು ಪತ್ತೆಯಾಗಿದೆ. ವಿಚಾರಣೆ ವೇಳೆ ಆತ ಬೈಕ್ ಕಳವು ಮಾಡಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಉಪನಿರೀಕ್ಷಕ ಶಂಭುಲಿಂಗಯ್ಯ ಎಂ. ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಎಸ್ಐ ವಿವೇಕಾನಂದ, ಹೆಡ್ಕಾನ್ಸ್ಟೇಬಲ್ ಮಹಮ್ಮದ್ ಅಜ್ಮಲ್ ಮತ್ತು ಮಂಜುನಾಥ್ ಎಂ.ಆರ್. ಭಾಗವಹಿಸಿದ್ದರು.













