ಶಾಸಕ ಯಶ್ಪಾಲ್ ಸುವರ್ಣ ಸಹಿತ ಬಿಜೆಪಿ ನಾಯಕರು ಅಧಿಕಾರದ ಅಮಲಿನ ಹೇಳಿಕೆಗಳನ್ನು ನಿಲ್ಲಿಸಿ : ವೆರೋನಿಕಾ ಕರ್ನೆಲಿಯೋ
ಉಡುಪಿ: ಅಧಿಕಾರದ ಅಮಲಿನಲ್ಲಿ ನೀಡುತ್ತಿರುವ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ಬಿಜೆಪಿ ನಾಯಕರು ತಕ್ಷಣ ನಿಲ್ಲಿಸಬೇಕು ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.
ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಧಿಕಾರದ ಅಮಲಿನಲ್ಲಿ ಅಲ್ಲ, ದೇಶದ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಉತ್ತಮ ಭವಿಷ್ಯ ನಿರ್ಮಿಸಬೇಕು, ದೇಶದ ಜನರು ಸುರಕ್ಷಿತ ಹಾಗೂ ನೆಮ್ಮದಿಯ ಬದುಕು ನಡೆಸಬೇಕು, ಯಾರೂ ಹಸಿದ ಹೊಟ್ಟೆಯಲ್ಲಿ ಮಲಗಬಾರದು ಹಾಗೂ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಸೇರಿದಂತೆ ಹಿರಿಯ ನಾಯಕರು ಕಂಡ ಭಾರತದ ಕನಸು ನನಸಾಗಬೇಕು ಎಂಬ ಚಿಂತನೆಯಲ್ಲಿದ್ದಾರೆ.
ಒರ್ವ ಲೋಕಸಭೆಯ ವಿರೋಧ ಪಕ್ಷದ ನಾಯಕನ ವಿರುದ್ದ ಶಾಸಕರು ನೀಡಿರುವ ಬಾಲಿಶ ಹೇಳಿಕೆ ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜನರಿಗೆ ಉತ್ತರದಾಯಿತ್ವ ಆಗಬೇಕಾದವರು ಜನರನ್ನು ಹಿಂಸೆಗೆ ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಉಡುಪಿಯಂತಹ ಬುದ್ದಿವಂತರ ಜಿಲ್ಲೆಯ ದುರಂತವಾಗಿದೆ. ಜಿಲ್ಲೆಯಲ್ಲಿ ರಾಜಕೀಯ ಸಿದ್ದಾಂತಗಳು ಬೇರೆ ಇದ್ದರೂ ಕೂಡ ಯಾವುದೇ ಪಕ್ಷದ ನಾಯಕರುಗಳು ಈ ಹಿಂದೆ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿದ ಉದಾಹರಣೆಗಳಿಲ್ಲ ಆದರೆ ಶಾಸಕ ಯಶಪಾಲ ಸುವರ್ಣ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಹೇಳಿಕೆ ನೀಡಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ನಾಯಕರು “ಕಾಕ್ರೋಚ್” ಎಂದು ಕರೆದಿರುವುದನ್ನು ಖಂಡಿಸಿದ ಅವರು, “ಕಾಕ್ರೋಚ್ಗಳಿಗೆ ₹100ರ ಔಷಧಿ ಸಿಂಪಡಿಸಬೇಕು” ಎಂದು ಹೇಳುವವರು, ಅದೇ ವಿದ್ಯಾರ್ಥಿಗಳ ಹೋರಾಟದ ಒತ್ತಡಕ್ಕೆ ಶಿಕ್ಷಣ ಸಚಿವರ ರಾಜೀನಾಮೆ ಆಗಿರುವುದನ್ನು ಹೇಗೆ ಸಮರ್ಥಿಸುತ್ತಾರೆ.
ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ಪುತ್ರಿ ಅರ್ಚಿತಾ ಸಚಿನ್ ರಾಹರ್ ಮತ್ತು ಅಸ್ಸಾಂ ಸಚಿವ ಕೇಶಬ್ ಮಹಂತ ಅವರ ಪುತ್ರಿ ದಿಬಿಸಾ ಮಹಂತ ಅವರು CJP (ಕಾಕ್ರೋಚ್ ಜನತಾ ಪಾರ್ಟಿ) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸಂದರ್ಭದಲ್ಲಿ ಅದರ ಬಗ್ಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆ?
ಯುವಕರು ಮತ್ತು ವಿದ್ಯಾರ್ಥಿಗಳು ದೇಶದ ಬೆನ್ನೆಲುಬಾಗಿದ್ದು, ಅವರು ಸಮಾಜದ ಸಮಸ್ಯೆಗಳ ಬಗ್ಗೆ ಜಾಗೃತರಾಗಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿದ್ದಾರೆ. ಅವರ ಭವಿಷ್ಯದೊಂದಿಗೆ ರಾಜಕೀಯ ಆಟವಾಡಬಾರದು. ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಸರ್ಕಾರ ಮತ್ತು ಆಡಳಿತ ಪಕ್ಷ ಗಮನ ಹರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.













