ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ದಾರಿತಪ್ಪಿಸುವ ಬಿಜೆಪಿಗರ ಹೇಳಿಕೆ ಬಾಲಿಶತನದ್ದು- ಮಂಜುನಾಥ ಭಂಡಾರಿ

Spread the love

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ದಾರಿತಪ್ಪಿಸುವ ಬಿಜೆಪಿಗರ ಹೇಳಿಕೆ ಬಾಲಿಶತನದ್ದು- ಮಂಜುನಾಥ ಭಂಡಾರಿ

ಮಂಗಳೂರು: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಮತ್ತು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ನಿಟ್ಟಿನಲ್ಲಿ ನ.24ರಂದು ಉಡುಪಿಯಲ್ಲಿ ನಡೆಯಲಿರುವ ಜಿಲ್ಲಾ’ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮಾಹಿತಿ ಕಾರ್ಯಾಗಾರ ಹಾಗೂ ಫಲಾನುಭವಿಗಳ ಸಂಭ್ರಮೋತ್ಸವ’ದಲ್ಲಿ ಫಲಾನುಭವಿಗಳು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು. ಕಾರ್ಯಕ್ರಮದ ಕುರಿತು ಉಡುಪಿ ಜಿಲ್ಲಾ ಬಿಜೆಪಿ ಶಾಸಕರ ಹೇಳಿಕೆ ಬಾಲಿಶತನದಿಂದ ಕೂಡಿದ್ದು ಸರಕಾರದ ಯೋಜನೆಗಳು ಬಡವರ್ಗದ ಜನರನ್ನು ತಲುಪುವುದನ್ನು ಸಹಿಸಲಾಗದೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಮಂಜುನಾಥ ಭಂಡಾರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರಕಾರದ ಐದು ಯೋಜನೆಗಳಾದ ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಫಲಾನುಭವಿಗಳನ್ನು ಒಂದೇ ವೇದಿಕೆಯಡಿ ಸೇರಿಸಿ, ಯೋಜನೆಗಳ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹೀಗಿರುವಾಗ ಇದಕ್ಕೆ ಗ್ರಾಮ ಪಂಚಾಯತ್ ಗಳ ತೆರಿಗೆಯ ಹಣ ಬಳಸಲಾಗುತ್ತಿದೆ ಎಂದು ಉಡುಪಿ ಜಿಲ್ಲೆಯ ಶಾಸಕರುಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದು ಅವರ ಅಲ್ಪಜ್ಞಾನಕ್ಕೆ ಉದಾಹರಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ನಿಯಮಾವಳಿಗಳು, ಅರ್ಹತ ಮಾನದಂಡಗಳು, ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ತಾಂತ್ರಿಕ ಅಡಚಣೆಗಳ ನಿವಾರಣೆ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಮಾಹಿತಿ ಮಳಿಗೆಗಳನ್ನು ತೆರೆಯುವ ಮೂಲಕ ಜನರಿಗೆ ನೆರವಾಗಲಿದೆ. ಗ್ಯಾರಂಟಿ ಸಭೆಗಳಲ್ಲಿ ಭಾಗವಹಿಸದ ಬಿಜೆಪಿಗರು ಈಗ ಅಲ್ಲಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮಗಿರುವ ಮಾಹಿತಿ ಕೊರತೆಯಿಂದಾಗಿ ಇಂತ ಹೇಳಿಕೆಗಳನ್ನು ಕೊಡುವುದನ್ನು ಮೊದಲು ನಿಲ್ಲಿಸಲಿ.

ಗ್ರಾಮ ಪಂ.ಗಳಿಂದ ತೆಗೆದುಕೊಳ್ಳುವ 25,000 ರೂ. ಹಣವನ್ನು ಸಮಾವೇಶಕ್ಕೆ ಬರುವ ಜನರಿಗೆ ಸೌಲಭ್ಯ ಒದಗಿಸಲು, ಯೋಜನೆ ಬಗ್ಗೆ ತಿಳಿಸಲು ಅಗತ್ಯ ಖರ್ಚುಗಳಿಗೆ ವಿನಿಯೋಗಿಸಲಾಗುತ್ತದೆಯೇ ಹೊರತು ಯಾವುದೇ ರೀತಿಯಲ್ಲಿ ದುಂಧುವೆಚ್ಚ ಮಾಡುತ್ತಿಲ್ಲ.

ಮತದಾರರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಹೇಳಿಕೆ ಕೊಡುತ್ತಿರುವ ಉಡುಪಿ ಜಿಲ್ಲಾ ಬಿಜೆಪಿ ನಾಯಕರುಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ಗ್ಯಾರಂಟಿ ಸಮಾವೇಶದಿಂದ ಗ್ರಾಮ ಪಂಚಾಯತ್ ಗಳು ದಿವಾಳಿಯಾಗುತ್ತದೆ ಎನ್ನುವ ಮಾತು ಮೂರ್ಖತನದಿಂದ ಕೂಡಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ನೇರವಾಗಿ ಮನೆ ಯಜಮಾನಿಯ ಖಾತೆಗೆ ನೇರವಾಗಿ ಜಮೆಯಾಗುವ ಕಾರಣ ಮನೆಯ ದಿನಸಿ, ಮಕ್ಕಳ ಶಾಲಾ ಖರ್ಚಿಗೆ ದೊಡ್ಡ ಆಸರೆಯಾಗಿದೆ. ಅದೇ ರೀತಿ ಗೃಹ ಜ್ಯೋತಿ ಯೋಜನೆಯ ಮೂಲಕ ತಿಂಗಳಿಗೆ ₹800 – ₹1,000 ಬಿಲ್ ಉಳಿತಾಯವಾಗುತ್ತಿದೆ. ಶಕ್ತಿ ಯೋಜನೆಯಲ್ಲಿ ಪ್ರತಿನಿತ್ಯ ಕೆಲಸಕ್ಕೆ, ಕಾಲೇಜಿಗೆ ಹೋಗುವ ಬಡ ಹೆಣ್ಣುಮಕ್ಕಳಿಗೆ ತಿಂಗಳಿಗೆ ₹1,500 – ₹2,000 ಉಳಿತಾಯವಾಗುತ್ತಿದೆ. ಅನ್ನಭಾಗ್ಯದ ಮೂಲಕ ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ಸಿಗುತ್ತಿದ್ದು ಅದೆಷ್ಟೋ ಬಡವರ ಹಸಿವು ನೀಗಿಸಿದೆ. ಪದವಿ ಮುಗಿಸಿ ಕೆಲಸ ಸಿಗದ ಯುವಕರಿಗೆ ತಿಂಗಳಿಗೆ ₹3,000, ಡಿಪ್ಲೊಮಾ ಅವರಿಗೆ ₹1,500 (2 ವರ್ಷ) ನೀಡುವ ಯುವನಿಧಿ ಯೋಜನೆ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ.

ಒಂದು ಬಡ ಕುಟುಂಬಕ್ಕೆ ತಿಂಗಳಿಗೆ ಸರಾಸರಿ 4,500ರೂ. ನಿಂದ 5,500 ರೂ.ವರೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಲಾಭ ಸಿಗುತ್ತಿದೆ. ತಮಗೆ ತಿಳಿದಂತೆ ಗೃಹಲಕ್ಷ್ಮಿ ಯೋಜನೆಯ ಸುಮಾರು 118 ಕೋಟಿ ರೂ.ಗಳಷ್ಟು ಹಣ ಮೃತರ, ಅನರ್ಹ ಫಲಾನುಭವಿಗಳ ಹಾಗೂ ಬೇನಾಮಿ ಖಾತೆಗೆ ಜಮಾ ಆಗಿದ್ದು ತಮಗೆಲ್ಲ ತಿಳಿದಿರುತ್ತದೆ. ಇದೇ ರೀತಿ ಸರಕಾರದ ಇನ್ನಿತರ ಯೋಜನೆಗಳು ಕೂಡ ಅನರ್ಹರ ಪಾಲಾಗುವುದನ್ನು ತಡೆದು ಅರ್ಹ ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸುವುದೇ ಈ ಗ್ಯಾರಂಟಿ ಸಂಭ್ರಮದ ಸದುದ್ದೇಶವಾಗಿದೆ ಎಂದು ಮಂಜುನಾಥ ಭಂಡಾರಿ ಅವರು ತಿಳಿಸಿದ್ದಾರೆ.


Spread the love
Subscribe
Notify of

0 Comments