ಮಲ್ಪೆಯಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಆರೋಪಿಯ ಬಂಧನ

Spread the love

ಮಲ್ಪೆಯಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಆರೋಪಿಯ ಬಂಧನ

ಉಡುಪಿ: ಮಲ್ಪೆಯ ಬಾಬುತೋಟ ಧಕ್ಕೆಯ ಬಳಿಯ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬರನ್ನು ಕುತ್ತಿಗೆಗೆ ಆಯುಧದಿಂದ ಇರಿದು ಕೊಲೆ ಮಾಡಿರುವ ಪ್ರಕರಣವನ್ನು ಮಲ್ಪೆ ಪೊಲೀಸರು ಭೇದಿಸಿದ್ದು, ಹುಬ್ಬಳ್ಳಿ ಹೊರವಲಯದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹುಬ್ಬಳ್ಳಿಯ ಆರೋಗ್ಯ ದಾಸ್ @ ಕಾಮಿ (55) ಎಂದು ಗುರುತಿಸಲಾಗಿದೆ.

ಮಲ್ಪೆ ಮರೈನ್ ಏಜೆನ್ಸಿ ಪಕ್ಕದ ಖಾಲಿ ಜಾಗದಲ್ಲಿ ಕಳೆದ ಮೂರು ವರ್ಷಗಳಿಂದ ಆಂಧ್ರಪ್ರದೇಶ ಮೂಲದ ಪರಮೇಶಿ @ ಪರಮ್ ವೇಲಿ (ಸುಮಾರು 55) ಎಂಬಾತ ವಾಸಿಸುತ್ತಿದ್ದ. ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಹೆಕ್ಕಿಕೊಂಡು ಜೀವನ ನಡೆಸುತ್ತಿದ್ದ ಆತ, ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಏಜೆನ್ಸಿ ಪಕ್ಕದ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ ಗೋಣಿ ಚೀಲ ಹಾಸಿಕೊಂಡು ಮಲಗುತ್ತಿದ್ದ ಎನ್ನಲಾಗಿದೆ.

ಸೆ.28ರಂದು ಸಂಜೆ 7 ಗಂಟೆಗೆ ಏಜೆನ್ಸಿಗೆ ಶೆಟರ್ ಹಾಕಿ ತೆರಳಿದ್ದ ಮಾಲಕರು , ಸೆ.29ರಂದು ಬೆಳಿಗ್ಗೆ 8.30ಕ್ಕೆ ವಾಪಸ್ ಬಂದಾಗ ಪರಮೇಶಿ @ ಪರಮ್ ವೇಲಿ ಗೋಣಿ ಚೀಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಆತನ ಕುತ್ತಿಗೆಯಿಂದ ರಕ್ತಸ್ರಾವವಾಗಿದ್ದು, ದುಷ್ಕರ್ಮಿಗಳು ಯಾವುದೋ ಆಯುಧದಿಂದ ಇರಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ, ಮಲ್ಪೆ ಠಾಣೆ ಪೊಲೀಸ್ ಉಪನಿರೀಕ್ಷಕ ಅನೀಲ್ ಕುಮಾರ್ ಡಿ. ನೇತೃತ್ವದಲ್ಲಿ ಹೆಚ್‌ಸಿ ವಿಶ್ವನಾಥ, ಹೆಚ್‌ಸಿ ಆದರ್ಶ ಹಾಗೂ ಸಿಪಿಸಿ ಕುಬೇರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹುಬ್ಬಳ್ಳಿ ಹೊರವಲಯದಲ್ಲಿ ಬಂಧಿಸಿದೆ.


Spread the love
Subscribe
Notify of

0 Comments