ರಂಗಭೂಮಿ ಯಕ್ಷಗಾನ ರಂಗಕಲೆಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣ: ಡಾ.ಎಚ್.ಎಸ್.ಬಲ್ಲಾಳ್

Spread the love

ರಂಗಭೂಮಿ ಯಕ್ಷಗಾನ ರಂಗಕಲೆಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣ: ಡಾ.ಎಚ್.ಎಸ್.ಬಲ್ಲಾಳ್

ಉಡುಪಿ : ನಾಟಕ ರಂಗಭೂಮಿ ಮೊದಲಾದ ರಂಗಕಲೆಗಳಿಂದ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಇಂತಹ ಕಲೆಗಳಿಗೆ ಪ್ರೋತ್ಸಾಹ ನೀಡುವವರನ್ನು ಗುರುತಿಸಿ ಗೌರವಿಸುವುದು ಉತ್ತಮ ಬೆಳವಣಿಗೆ ಎಂದು ಮಣಿಪಾಲ ಮಾಹೆಯ ಸಹಕುಲಾಧಿಪತಿ, ಡಾ. ಎಚ್ಎಸ್ ಬಲ್ಲಾಳ್ ಹೇಳಿದರು.

ಅವರು ಶುಕ್ರವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ಸಂಸ್ಥೆ ವತಿಯಿಂದ ಸಂಸ್ಥೆಯ ಸ್ಥಾಪಕ ದಿ. ಕುತ್ಪಾಡಿ ಆನಂದ ಗಾಣಿಗ ಅವರ ಸ್ಮರಣಾರ್ಥ ಹಮ್ಮಿಕೊಂಡ ಎರಡು ದಿನಗಳ ರಂಗಭೂಮಿ ಆನಂದೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಉಡುಪಿಯ ಸಾಯಿರಾಧಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮನೋಹರ್ ಎಸ್. ಶೆಟ್ಟಿ ಅವರಿಗೆ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಪ್ರಾಯೋಜಿತ ತಲ್ಲೂರ್ಸ್ ಸಂಸ್ಕೃತಿ ಸಾಧಕ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.

ಉಡುಪಿಯಲ್ಲಿ ರಂಗಭೂಮಿ, ಯಕ್ಷಗಾನ ಮೊದಲಾದ ರಂಗ ಕಲೆಗಳು ಸಮೃದ್ಧವಾಗಿ ಬೆಳೆಯಲು ಇಲ್ಲಿನ ಸಂಘ-ಸಂಸ್ಥೆಗಳು, ಉದ್ಯಮಿಗಳು ನೀಡಿರುವ ಪ್ರೋತ್ಸಾಹವೆ ಪ್ರಮುಖ ಕಾರಣವಾಗಿದೆ. ಮಾನವ ತನ್ನ ಒಳ್ಳೆಯ ಕಾರ್ಯಗಳಿಂದ ಸಮಾಜಕ್ಕೆ ದೊಡ್ಡ ಆಸ್ತಿ ಆಗುತ್ತಾನೆ. ಈ ರೀತಿಯಲ್ಲಿ ರಂಗಭೂಮಿ ಉಡುಪಿಯನ್ನು ಕಟ್ಟಿ ಬೆಳೆಸಿದ ಆನಂದ ಗಾಣಿಗರ ಹೆಸರಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ತಂದಿದೆ. ಅವರ ನಂತರ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ , ಕಾರ್ಯದರ್ಶಿ ಪ್ರದೀಪ್ ಚಂದ್ರ ಹಾಗೂ ಅವರ ತಂಡ ಅಭಿನಂದನಾರ್ಹರು ಎಂದು ಅವರು ಹೇಳಿದರು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಮನೋಹರ್ ಎಸ್ .ಶೆಟ್ಟಿಯವರು, ರಂಗಭೂಮಿ ನೀಡುವ ಉತ್ತಮ ಸಂದೇಶಗಳು ಸಮಾಜಕ್ಕೆ ದಾರಿ ದೀಪವಾಗಿವೆ. ರಂಗಭೂಮಿ ಉಡುಪಿ ಅನೇಕ ಪ್ರಭುದ್ಧ ಕಲಾವಿದರನ್ನು ಸಮಾಜಕ್ಕೆ ನೀಡಿದೆ. ಕುತ್ಪಾಡಿ ಆನಂದ ಗಾಣಿಗರು ರಂಗಭೂಮಿಯನ್ನು ಕಟ್ಟಿ ಬೆಳೆಸಲು ವಹಿಸಿದ್ದ ಶ್ರಮವನ್ನು ಕಣ್ಣಾರೆ ಕಂಡಿದ್ದೇನೆ. ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುವ ಈ ಪ್ರಶಸ್ತಿಗೆ ಆಭಾರಿಯಾಗಿದ್ದೇನೆ ಎಂದರು.

ಜ್ಞಾನಸುಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಸುಧಾಕರ್ ಶೆಟ್ಟಿ ಅವರು ಮಾತನಾಡಿ ಮನೋಹರ್ ಶೆಟ್ಟಿ ಅವರಂತಹ ಸಾಧಕರಿಗೆ ಪ್ರಶಸ್ತಿ ನೀಡಿರುವುದು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ ಎಂದರು.

ರಂಗಭೂಮಿ ಉಡುಪಿ ಅಧ್ಯಕ್ಷ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಆನಂದ ಗಾಣಿಗರು ಸುಮಾರು 45 ವರ್ಷಗಳ ಕಾಲ ರಂಗಭೂಮಿ ಉಡುಪಿ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನೇ ಅರ್ಪಿಸಿಕೊಂಡ ಮಹಾನುಭಾವರು. ಅವರ ನೆನಪಿನ ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತಿದ್ದೇವೆ . ಈವರೆಗೆ 15 ಮಂದಿ ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ತಲ್ಲೂರ್ಸ್ ಸಂಸ್ಕೃತಿ ಸಾಧಕ ಪ್ರಶಸ್ತಿಯನ್ನು ಉಡುಪಿಯ ಸಾಯಿರಾಧಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮನೋಹರ್ ಎಸ್ .ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಟ್ರಸ್ಟಿ, ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಎಸ್. ಶೆಟ್ಟಿ, ಅಲಯನ್ಸ್ ಉಡುಪಿ ಜಿಲ್ಲಾ ಗವರ್ನರ್ ಸುನೀಲ್ ಕುಮಾರ್ ಶೆಟ್ಟಿ, ಆನಂದ ಗಾಣಿಗ ಅವರ ಅಳಿಯ ಗೋಪಾಲ ಗಾಣಿಗ, ರಂಗಭೂಮಿ ಉಡುಪಿ ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು , ಎನ್. ಆರ್.ಬಲ್ಲಾಳ್, ಅನುರಾಧ ಮನೋಹರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಚಾರ್ ವಾಚಿಸಿದರು. ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments