ಸಚಿವ ಸಂಪುಟ: ಮೂಲಸೌಲಭ್ಯ, ಕೈಗಾರಿಕೆ ಅಭಿವೃದ್ಧಿಗೆ ಒತ್ತು- ಸಚಿವ ಯು.ಟಿ ಖಾದರ್

Spread the love

ಸಚಿವ ಸಂಪುಟ: ಮೂಲಸೌಲಭ್ಯ, ಕೈಗಾರಿಕೆ ಅಭಿವೃದ್ಧಿಗೆ ಒತ್ತು- ಸಚಿವ ಯು.ಟಿ ಖಾದರ್

ಮಂಗಳೂರು: ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿ, ಮೀನುಗಾರಿಕಾ ಕ್ಷೇತ್ರ, ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ವಿವಿಧ ಕೈಗಾರಿಕೆ, ಮೀನುಗಾರಿಕಾ ಸಂಘಟನೆಗಳು, ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಜಮೀನುಗಳ ಕೊರತೆ ಇರುವ ಬಗ್ಗೆ ಮನವಿಗಳು ಬಂದಿದ್ದು, ಈ ನಿಟ್ಟಿನಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಸರಕಾರವು ಗಮನಹರಿಸಲಿದೆ. ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರಕಾರ ಒತ್ತು ನೀಡಲಿದೆ. ಈಗಾಗಲೇ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿಗೆ 28 ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಸಚಿವರು ತಿಳಿಸಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿಗೆ ಬರುವ ಅಪ್ರೆಂಟಿಸ್ಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಸಮೀಪದಲ್ಲಿ ವಸತಿಗೃಹ ಸ್ಥಾಪಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಕೆನರಾ ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಮೀನುಗಾರ ಮುಖಂಡರಾದ ಚೇತನ್ ಮತ್ತು ಮೋಹನ್ ಬೆಂಗ್ರೆ ಮಾತನಾಡಿ, ನಗರದ ಹಳೆ ಬಂದರು ಧಕ್ಕೆಯಲ್ಲಿ ಬೋಟುಗಳು ತಂಗಲು ಸ್ಥಳಾವಕಾಶ ಸಮಸ್ಯೆ ತೀವ್ರವಾಗಿದೆ. ದೊಡ್ಡ ಬೋಟ್ಗಳೊಂದಿಗೆ ಸಣ್ಣ ಬೋಟ್ಗಳು ಧಕ್ಕೆಗೆ ಆಗಮಿಸಲು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಸಬಾ ಬೆಂಗ್ರೆ, ಹೊಸಬೆಟ್ಟು, ತಣ್ಣೀರು ಬಾವಿ, ಕೋಟೆಪುರದಲ್ಲಿ ಮೀನುಗಾರಿಕಾ ಜೆಟ್ಟಿಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು. ನದಿಯ ಹೂಳೆತ್ತುವ ಡ್ರೆಜ್ಜಿಂಗ್ ಕಾಮಗಾರಿಯನ್ನು ಆದ್ಯತೆಯಲ್ಲಿ ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಮಾತನಾಡಿ, ನವ ಮಂಗಳೂರು ಬಂದರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 150 ಎಕರೆ ಜಾಗವನ್ನು ಬಳಸಿಕೊಂಡು ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದ್ದು, ಈ ಬಗ್ಗೆ ಎನ್.ಎಂ.ಪಿ.ಎ ಜೊತೆ ಚರ್ಚೆ ಆಗಿದೆ. ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಅಭಿವೃದ್ಧಿ, ಆನೆ ಶಿಬಿರ, ಸಿ.ಆರ್.ಝೆಡ್ ನಿಯಮ ಪರಿಷ್ಕರಣೆ, ಕರಾವಳಿ ರಸ್ತೆ ಅಭಿವೃದ್ಧಿ ಮತ್ತಿತರ ಯೋಜನೆಗಳ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಸಚಿವ ಯು.ಟಿ ಖಾದರ್ ಮಾತನಾಡಿ, ತೊಕ್ಕೊಟ್ಟು-ಮುಡಿಪು-ಮೆಲ್ಕಾರ್ ರಸ್ತೆಯನ್ನು ಶಿಕ್ಷಣ, ಆರೋಗ್ಯ, ಧಾರ್ಮಿಕ, ಐಟಿ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಿ ಬೆಂಗಳೂರು ಮತ್ತು ಕೇರಳ ರಸ್ತೆಗೆ ಸಂಪರ್ಕ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಸಿದ್ಧಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಭೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಪೆÇಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪೆÇಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಮತ್ತಿತ್ತರರು ಇದ್ದರು.


Spread the love
Subscribe
Notify of

0 Comments