ರಾ.ಹೆ.66ರಲ್ಲಿ ಶಾಲಾ ಬಸ್ಸಿಗೆ ಕ್ಯಾಂಟರ್ ಢಿಕ್ಕಿ: 7 ವಿದ್ಯಾರ್ಥಿಗಳಿಗೆ ಗಾಯ
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕಾಪಿಕಾಡು ಬಳಿ ಇಂದು ಬೆಳಿಗ್ಗೆ ಸುಮಾರು 8 ಗಂಟೆ ಸುಮಾರಿಗೆ ಶಾಲಾ ಬಸ್ಸಿನ ಹಿಂಭಾಗಕ್ಕೆ ಮೀನು ಸಾಗಾಟದ ಕ್ಯಾಂಟರ್ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡ ಘಟನೆ ನಡೆದಿದೆ.
ತಲಪಾಡಿಯ ಶಾರದಾ ನಿಕೇತನ ಪಬ್ಲಿಕ್ ಸ್ಕೂಲ್ & ಕಾಲೇಜಿಗೆ ಸೇರಿದ ಬಸ್ಸು ಹೆದ್ದಾರಿ ಅಂಚಿನಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ತಲಪಾಡಿ ಕಡೆಗೆ ತೆರಳುತ್ತಿದ್ದ ವೇಳೆ, ಹಿಂದಿನಿಂದ ಬಂದ ಮೀನಿನ ಕ್ಯಾಂಟರ್ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ.
ಗೋವಾದಿಂದ ಕೇರಳ ಕಡೆಗೆ ಮೀನು ಸಾಗಿಸುತ್ತಿದ್ದ ಕುಂದಾಪುರ ಮೂಲದ ಚಾಲಕ ಸಂಜೀವ ನಿದ್ರಾಮಂಪರಿನಲ್ಲಿ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಘಟನೆಯಲ್ಲಿ ಬಸ್ಸಿನಲ್ಲಿದ್ದ ನಾಲ್ಕು ವಿದ್ಯಾರ್ಥಿಗಳು ಹಾಗೂ ಮೂರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಗಳಿಗೆ ತೊಕ್ಕೊಟ್ಟಿನ ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದೆ. ಕಾಲಿಗೆ ಗಾಯಗೊಂಡ ವಿದ್ಯಾರ್ಥಿಯೊಬ್ಬರನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದ ವೇಳೆ ಬಸ್ಸಿನಲ್ಲಿ ಒಟ್ಟು 24 ಮಂದಿ ವಿದ್ಯಾರ್ಥಿಗಳು ಇದ್ದರು. ಹೆಚ್ಚಿನ ಅಪಾಯ ತಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ.













