ಕಮಿಷನ್ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹ : ಪ್ರಕರಣ ದಾಖಲು

Spread the love

ಕಮಿಷನ್ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹ : ಪ್ರಕರಣ ದಾಖಲು

ಕಡಬ: ಕಡಿಮೆ ದರದಲ್ಲಿ ದುಬಾರಿ ವಸ್ತುಗಳನ್ನು ನೀಡುವುದಾಗಿ ಹಾಗೂ ಹೆಚ್ಚಿನ ಕಮಿಷನ್ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ‘KINGS Bazaar’ ಸಂಸ್ಥೆ ಹಾಗೂ ಅದರ ಮಾಲೀಕರು ಸೇರಿದಂತೆ 7 ಮಂದಿ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಾವೇರಿ ಮೂಲದ ‘KINGS Bazaar’ ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಶೀಘ್ರವಾಗಿ ಹಣ ಗಳಿಸುವ ಅವಕಾಶ, ಹೆಚ್ಚಿನ ಬೆಲೆಯ ವಸ್ತುಗಳನ್ನು ಕಡಿಮೆ ದರದಲ್ಲಿ ಪಡೆಯುವ ಅವಕಾಶ ಹಾಗೂ ಯೋಜನೆಗೆ ಹೆಚ್ಚಿನ ಜನರನ್ನು ಸೇರ್ಪಡೆಗೊಳಿಸಿದರೆ ಕಮಿಷನ್ ಹಣ ಗಳಿಸಬಹುದು ಎಂದು ಭರವಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಈ ಮೂಲಕ ನಿಷೇಧಿತ ಹಣಪರಿಚಲನೆ ಯೋಜನೆ ನಡೆಸಿ ಸಾರ್ವಜನಿಕರಿಂದ ಹಣ ಸ್ವೀಕರಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಸಂಬಂಧ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿಗಳಾದ ಸುಬ್ರಹ್ಮಣ್ಯ ಶಗ್ರಿತ್ತಾಯ (50), ಗುರುಮೂರ್ತಿ (54), ಕಡಬ ಬಿಳಿನೆಲೆ ನಿವಾಸಿಗಳಾದ ಸುರೇಶ್ ಆರ್.ಎಸ್. (55), ಕಿರಣ್ ಕುಮಾರ್ (21), ಶ್ರೀನಾಥ್ (48), ಕಡಬ ಕೌಕ್ರಾಡಿ ನಿವಾಸಿ ಬಾಲಕೃಷ್ಣ ಪಿ.ಹೆಚ್. (42) ಹಾಗೂ ಪುತ್ತೂರು ನಿವಾಸಿ ಸಂದೇಶ್ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 100/2026 ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ Prize Chit and Money Circulation Schemes (Banning) Act, 1978ರ ಕಲಂ 4, 5 ಮತ್ತು 6ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


Spread the love
Subscribe
Notify of

0 Comments