ಬಿ.ಸಿ.ರೋಡ್ ಚಲೋ ಪ್ರತಿಭಟನೆ: ಕಾನೂನು ಕ್ರಮಗಳ ವಿರುದ್ಧ ರಾಜಶೇಖರಾನಂದ ಸ್ವಾಮೀಜಿ ಆಕ್ರೋಶ

Spread the love

ಬಿ.ಸಿ.ರೋಡ್ ಚಲೋ ಪ್ರತಿಭಟನೆ: ಕಾನೂನು ಕ್ರಮಗಳ ವಿರುದ್ಧ ರಾಜಶೇಖರಾನಂದ ಸ್ವಾಮೀಜಿ ಆಕ್ರೋಶ

ಬಂಟ್ವಾಳ: ಬಿ.ಸಿ.ರೋಡ್ ಚಲೋ ಪ್ರತಿಭಟನೆಯಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಪೊಲೀಸ್ ಕ್ರಮಗಳು ಹಾಗೂ ಹಿಂದೂ ಕಾರ್ಯಕರ್ತರ ವಿರುದ್ಧದ ಪ್ರಕರಣಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಇದು ಆಶೀರ್ವಚನ ಕೇಳುವ ಸಮಯವಲ್ಲ, ಪ್ರತಿಭಟಿಸುವ ಸಮಯ. ಪೊಲೀಸ್ ವರಿಷ್ಠಾಧಿಕಾರಿಯವರೇ, ನೀವು ದಕ್ಷರು ಎಂದು ಬಂದಿದ್ದೀರಲ್ಲ. ನಿಮ್ಮ ಹೆಸರಿನ ಮೊದಲು ಡಾಕ್ಟರ್ ಇದೆ. ನೀವು ಮೊದಲು ನಮ್ಮ ಡಾಕ್ಟರ್‌ರನ್ನು ನೋಡಿ ಕಲಿಯಿರಿ” ಎಂದು ಅವರು ಹೇಳಿದರು.

“ಕೋಕಾ ಕಾಯಿದೆ ನ್ಯಾಯಾಲಯದಲ್ಲಿ ಬಿದ್ದುಹೋಗಿದೆ. ಈಗ ಗೂಂಡಾ ಕಾಯಿದೆ ಜಾರಿಯಲ್ಲಿದೆ. ಜಾಮೀನು ಸಿಗಬಾರದು ಎಂಬುದು ನಿಮ್ಮ ನಿಲುವೇ?” ಎಂದು ಪ್ರಶ್ನಿಸಿದ ಅವರು, ಪ್ರತಿಯೊಬ್ಬ ಹಿಂದೂ ಕಾರ್ಯಕರ್ತರೂ ತಮ್ಮ ಸಂಘಟನೆಗೆ ಬದ್ಧರಾಗಿದ್ದಾರೆ ಎಂದರು.

ರಾಜಕೀಯಕ್ಕೆ ಹೋಗುವ ಆಸಕ್ತಿ ಇದ್ದವರು ಹೋಗಬಹುದು. ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ ಸ್ವಾಮೀಜಿ, “ಹಿಂದುತ್ವದ ಶಕ್ತಿ ಕೇಂದ್ರವಾಗಿರುವ ಈ ಭಾಗವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದರು.

ಭರತ್ ಕುಮ್ಡೇಲು ಅವರ ಬಂಧನದ ವಿಚಾರವಾಗಿ ಮಾತನಾಡಿದ ಅವರು, “ಇಂದು ನೀವು ಭರತ್ ಕುಮ್ಡೇಲು ಅವರನ್ನು ಅಲೆದಾಡಿಸಿದ್ದೀರಿ. ಆದರೆ ನಮ್ಮ ಸರ್ಕಾರ ಬಂದ ಬಳಿಕ ನಿಮ್ಮನ್ನು ಅಲೆದಾಡಿಸುತ್ತೇವೆ” ಎಂದು ಹೇಳಿದರು. ಇದೇ ವೇಳೆ ಕಲ್ಲಡ್ಕ ಪ್ರಭಾಕರ ಭಟ್ ಅವರ ಹಿಂದೆ ಇಡೀ ಹಿಂದೂ ಸಮಾಜ ಇದೆ ಎಂದು ಹೇಳಿಕೊಂಡರು.

“ನಮಗೆ ನೂರು ಡಾಕ್ಟರ್‌ಗಳಿಲ್ಲ, ಇರುವವರು ಒಬ್ಬರೇ ಡಾಕ್ಟರ್. ಆ ಡಾಕ್ಟರ್‌ಗೆ ಕಿರುಕುಳ ನೀಡಲು ಹೇಳಿದ ಆ ಚೇಲಾ ಯಾರು? ಅಷ್ಟು ತಾಕತ್ತಿರುವ ಸಮಾಜದ ಮುಖಂಡರಿಗೆ ಕಿರುಕುಳ ನೀಡಬೇಡಿ. ಹಿಂದೂ ಸಮಾಜದ ಚಿಕಿತ್ಸಕ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಕಿರುಕುಳ ನೀಡಬೇಡಿ” ಎಂದು ಅವರು ಹೇಳಿದರು.

ಬಂಟ್ವಾಳದಲ್ಲಿ ನಡೆದ ಹತ್ಯೆಯನ್ನು ಸಮರ್ಥಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಯಾರೋ ನಾಲ್ಕೈದು ಮಂದಿ ಆಕ್ರೋಶದಿಂದ ಮಾಡಿರಬಹುದು. ಎಲ್ಲರ ಮನೆಯ ನೋವು ಒಂದೇ. ನಾವು ಆ ಹತ್ಯೆಯನ್ನು ಸಮರ್ಥಿಸುವುದಿಲ್ಲ” ಎಂದರು.

ಹಿಂದೂ ಸಮಾಜವನ್ನು ಮತ್ತಷ್ಟು ಗಟ್ಟಿಯಾಗಿ ಹಾಗೂ ಸದೃಢವಾಗಿ ಸಂಘಟಿಸಬೇಕಿದೆ ಎಂದು ಹೇಳಿದ ಅವರು, ಭರತ್ ಕುಮ್ಡೇಲು ವಿರುದ್ಧ ಬೆದರಿಕೆಯ ಹೇಳಿಕೆ ನೀಡಿರುವುದಾಗಿ ಆರೋಪಿಸಲಾದ ವ್ಯಕ್ತಿಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

“ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸಂಘಟನೆಗಳು ಹಿಂದೂ ಸಮಾಜದ ಅಸ್ಮಿತೆಯಾಗಿವೆ. ಅವರು ಸಮಾಜಕ್ಕಾಗಿ ದುಡಿಯುವವರು ಹಾಗೂ ಸಮಾಜದೊಂದಿಗೆ ಇರುವವರು. ನೀವು ಒಬ್ಬ ಭರತ್ ಕುಮ್ಡೇಲು ಅವರನ್ನು ಬಂಧಿಸಿದರೆ ಸಾವಿರಾರು ಕುಮ್ಡೇಲುಗಳು ಹುಟ್ಟುತ್ತಾರೆ” ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಕೊನೆಯಲ್ಲಿ ಭರತ್ ಕುಮ್ಡೇಲು ಅವರ ವಿರುದ್ಧದ ಕ್ರಮಗಳನ್ನು ನಿಲ್ಲಿಸುವಂತೆ ಹಾಗೂ ಗೂಂಡಾ ಕಾಯ್ದೆಯನ್ನು ಹಿಂಪಡೆಯುವಂತೆ ಅವರು ಆಗ್ರಹಿಸಿದರು.


Spread the love
Subscribe
Notify of

0 Comments