ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ – ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ

Spread the love

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ – ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ

ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಸಮಿತಿ ರಚಿಸಿ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್‌ನ ಮಾನ್ಯ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು ಬಕ್ರು ಅವರು ಭರವಸೆ ನೀಡಿದ್ದಾರೆ ಎಂದು ಹೈಕೋರ್ಟ್ ಕರಾವಳಿ ಸಂಚಾರಿ ಪೀಠ ಸ್ಥಾಪನೆ ಹೋರಾಟ ಸಮಿತಿಯ ಸಂಚಾಲಕರಾದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಕರ್ನಾಟಕ ಸರ್ಕಾರ ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ವಿವಿಧ ಕಡೆಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು, ಜಿಲ್ಲೆಗಳ ನಡುವಿನ ಚರ್ಚೆಗಳು ಹಾಗೂ ಎದುರಾಗಿರುವ ಅಡೆತಡೆಗಳ ಕುರಿತು ಇಂದು ಹೋರಾಟ ಸಮಿತಿಯ ನಿಯೋಗವು ಬೆಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ವಿಚಾರ ವಿನಿಮಯ ನಡೆಸಿತು.ನಿಯೋಗದಲ್ಲಿ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಜಗದೀಶ್ ಶೇಣವ, ಉಡುಪಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ, ರೋನಾಲ್ಡ್ ಪ್ರವೀಣ್, ಮಾಜಿ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ರಾಘವೇಂದ್ರ ರಾವ್, ಪ್ರಧಾನ ಜಿಲ್ಲಾ ಸರ್ಕಾರಿ ವಕೀಲರು ಹಾಗೂ ಕರಾವಳಿ ಹೈಕೋರ್ಟ್ ಪೀಠ ಸಮಿತಿಯ ಪಿಆರ್‌ಒ ಎಂ. ಪಿ. ನೊರೋನ್ಹಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠದ ಅಗತ್ಯತೆಯ ಬಗ್ಗೆ ತಮಗೆ ಅರಿವಿದ್ದು, ಈ ಕುರಿತು ನಿಯೋಗದೊಂದಿಗೆ ವಿವರವಾಗಿ ವಿಚಾರ ವಿನಿಮಯ ನಡೆಸಿದರು. ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದ ವಾಸ್ತವಾಂಶಗಳು ಹಾಗೂ ವಿವಿಧ ವಿಚಾರಗಳನ್ನು ಪರಿಶೀಲಿಸಲು ಕೂಡಲೇ ಒಂದು ಸಮಿತಿಯನ್ನು ರಚಿಸುವಂತೆ ನಿಯೋಗ ಮಾಡಿದ ಮನವಿಯನ್ನು ಅವರು ಪರಿಗಣಿಸುವುದಾಗಿ ತಿಳಿಸಿದರು. ಸಮಿತಿಯ ಮೂಲಕ ವಾಸ್ತವಾಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕೆಂಬ ಬೇಡಿಕೆಗೆ ಕರಾವಳಿ ಭಾಗದ ಬಾರ್ ಅಸೋಸಿಯೇಷನ್‌ಗಳ ಸದಸ್ಯರು, ಸಾರ್ವಜನಿಕರು, ಜನಸಾಮಾನ್ಯರು, ಸಂಘ-ಸಂಸ್ಥೆಗಳು, ವಿವಿಧ ಕಾರ್ಯಕರ್ತರು ಹಾಗೂ ಇತರ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಕರ್ನಾಟಕ ಸರ್ಕಾರವೂ ಮಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಸಂದರ್ಭದಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಯೊಂದಿಗೆ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ವಿಚಾರವೂ ಪ್ರಮುಖವಾಗಿರಲಿದೆ. ಸಂಚಾರಿ ಪೀಠ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಶ್ರೀ ಐವನ್ ಡಿ’ಸೋಜಾ ತಿಳಿಸಿದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೆಪ್ಟೆಂಬರ್ ತಿಂಗಳಲ್ಲಿ ಈ ಕುರಿತು ಮತ್ತೊಮ್ಮೆ ಭೇಟಿ ನೀಡಿ ವಿಚಾರ ವಿನಿಮಯ ನಡೆಸುವುದಾಗಿ ತಿಳಿಸಿರುವುದು ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಐವನ್ ಡಿ’ಸೋಜಾ ಹೇಳಿದರು.


Spread the love
Subscribe
Notify of

0 Comments