ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಕಾಂಗ್ರೆಸ್ ಕಾರ್ಯಕರ್ತನ ಬಂಧನ
ಕಾರ್ಕಳ: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ತಲೆ ಕತ್ತರಿಸಿರುವ ಚಿತ್ರವನ್ನು ಬಳಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಹಾಗೂ ಹಲ್ಲೆಗೆ ಪ್ರಚೋದಿಸುವ ರೀತಿಯಲ್ಲಿ ವಿಡಿಯೋ ಸೃಷ್ಟಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಪ್ರಸಾದ್ ಶೆಟ್ಟಿ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ.12ರಂದು ರಾತ್ರಿ 10 ಗಂಟೆ ಸುಮಾರಿಗೆ ಕಾರ್ಕಳ ತಾಲೂಕು ನಿವಾಸಿ ವಿಘೇಶ್ ಪ್ರಸಾದ್ ರಾವ್ ಅವರು ಫೇಸ್ಬುಕ್ ವೀಕ್ಷಿಸುತ್ತಿದ್ದ ವೇಳೆ, ‘Prasad Shetty’ ಹೆಸರಿನ ಖಾತೆಯಲ್ಲಿ ಶಾಸಕ ಸುನೀಲ್ ಕುಮಾರ್ ಅವರ ತಲೆ ಕತ್ತರಿಸಿರುವ ಚಿತ್ರವನ್ನು ಬಳಸಿ ಎಡಿಟ್ ಮಾಡಲಾದ ಪ್ರಚೋದನಕಾರಿ ವಿಡಿಯೋವೊಂದು ಪೋಸ್ಟ್ ಮಾಡಿರುವುದು ಗಮನಕ್ಕೆ ಬಂದಿದೆ.
ವಿಡಿಯೋದಲ್ಲಿ ಶಾಸಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ, ಹಲ್ಲೆ ಹಾಗೂ ಕೊಲೆಗೆ ಪ್ರಚೋದಿಸುವ ರೀತಿಯ ಮಾತುಗಳು ಮತ್ತು ಸಿನಿಮಾದ ಹಾಡನ್ನು ಹಿನ್ನೆಲೆ ಧ್ವನಿಯಾಗಿ ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಉದ್ದೇಶದಿಂದ ವಿಡಿಯೋವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಆರೋಪಿಸಿ ವಿಘೇಶ್ ಪ್ರಸಾದ್ ರಾವ್ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ್ ಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಲಾಗಿದೆ.













