2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಖಚಿತ, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ನಿರ್ಧಾರವಿಲ್ಲ: ರಘುಪತಿ ಭಟ್
ಉಡುಪಿ: 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ವಿಶೇಷ ತಯಾರಿ ಆರಂಭಿಸಿಲ್ಲ. ತಾವು ಮೂರು ಬಾರಿ ಶಾಸಕರಾಗಿದ್ದಾಗ ಪಕ್ಷ ಮತ್ತು ಕಾರ್ಯಕರ್ತರ ಬೆಂಬಲವಿತ್ತು. ಈಗ ಪಕ್ಷೇತರನಾಗಿ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಅಭಿಮಾನಿಗಳು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೇನೆ ಎಂದರು.
ನವರಾತ್ರಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದೆ. ಇದೀಗ ಮುಂದಿನ ರಾಜಕೀಯ ನಡೆ ಕುರಿತು ಚಿಂತನೆ ಆರಂಭಿಸಲಿದ್ದೇನೆ. ಚುನಾವಣೆಗೆ ಹೆಚ್ಚು ಸಮಯವಿಲ್ಲದ ಕಾರಣ ಶೀಘ್ರದಲ್ಲೇ ನಿರ್ಧಾರಕ್ಕೆ ಬರಬೇಕಿದೆ. ಬಿಜೆಪಿ ವಾಪಸ್ ಕರೆ ನೀಡಿದರೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಅಗತ್ಯ ಬರುವುದಿಲ್ಲ. ಕಳೆದ 25–30 ವರ್ಷಗಳಿಂದ ನನ್ನನ್ನು ನೋಡಿದವರು ಹಾಗೂ ನನ್ನ ರಾಜಕೀಯ ಬೆಳವಣಿಗೆಯನ್ನು ತಿಳಿದವರು ಇದ್ದಾರೆ ಎಂದು ಹೇಳಿದರು.

ಬಿಜೆಪಿ ಮರಳಿ ಆಹ್ವಾನಿಸಿದರೆ ಪಕ್ಷಕ್ಕೆ ಹೋಗಲು ಸಿದ್ಧನಿದ್ದೇನೆ. ಆದರೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರನ್ನು ಬಿಡಿ, ಜಿಲ್ಲೆಯ ಬಿಜೆಪಿ ನಾಯಕರೂ ನನ್ನೊಂದಿಗೆ ಮಾತನಾಡಿಲ್ಲ ಎಂದು ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ವ್ಯಕ್ತಪಡಿಸಿದ ಅವರು, ಪಕ್ಷದ ಸ್ಥಳೀಯ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ ಮತ್ತು ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಕರೆತಂದು ಪಕ್ಷ ಸಂಘಟಿಸಿದ್ದೇನೆ ಎಂದು ತಿಳಿಸಿದರು.
ಹಿಂದೆ ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಬಂದಾಗ ತಾವು ಮತ್ತು ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆವು ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧವೂ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು. “ಬಿಜೆಪಿಯಿಂದ ಮೂರು ಬಾರಿ ಶಾಸಕನಾಗಿದ್ದ ನನಗೆ ಈಗ ಬಿಜೆಪಿ ಶಾಸಕರಿಂದಲೇ ತೊಂದರೆಯಾಗುತ್ತಿದೆ. ಸಿಂಗಲ್ ಲೇಔಟ್ ವಿಚಾರದಲ್ಲಿ ಧರಣಿ ನಡೆಸಬೇಕಾದ ಪರಿಸ್ಥಿತಿ ಎದುರಾಯಿತು” ಎಂದು ಹೇಳಿದರು.
2004ರ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದಾಗ ಸುಧಾಕರ್ ಶೆಟ್ಟಿ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆಗ ಯಶ್ಪಾಲ್ ಸುವರ್ಣ ತಮ್ಮ ವಿರುದ್ಧ ಕೆಲಸ ಮಾಡಿದ್ದರು ಎಂದು ಆರೋಪಿಸಿದ ಭಟ್, ತಾವು ಗೆದ್ದ ಬಳಿಕ ವೈಷಮ್ಯ ಮರೆತು ಅವರನ್ನು ನಾಮನಿರ್ದೇಶಿತ ಕೌನ್ಸಿಲರ್ ಆಗಿ ಪಕ್ಷಕ್ಕೆ ಸೇರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾಗಿ ತಿಳಿಸಿದರು. ತಾವು ವೈಯಕ್ತಿಕ ದ್ವೇಷದ ರಾಜಕಾರಣ ಮಾಡಿಲ್ಲ; ತಮ್ಮ ವಿರುದ್ಧ ಕೆಲಸ ಮಾಡಿದವರನ್ನೂ ಪಕ್ಷಕ್ಕೆ ಕರೆತಂದಿದ್ದೇನೆ ಎಂದರು.
2008ರಲ್ಲಿ ಬ್ರಹ್ಮಾವರ ಭಾಗದಲ್ಲಿ ಜಯಪ್ರಕಾಶ್ ಹೆಗ್ಡೆ ಅವರ ಪ್ರಭಾವವಿತ್ತು. ಆ ಭಾಗದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸ್ಪರ್ಧಿಸಿದರೆ ಸೋಲುವ ಪರಿಸ್ಥಿತಿ ಇತ್ತು. ತಾವು ಸ್ಪರ್ಧಿಸಿದಾಗ ಕಾಂಗ್ರೆಸ್ನ ಪ್ರಭಾವ ಕಡಿಮೆ ಮಾಡುವ ಕೆಲಸ ಮಾಡಿದ್ದಾಗಿ ಹೇಳಿದರು.
2018ರಲ್ಲಿ ಅಂದಿನ ಶಾಸಕ ಹಾಗೂ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ ಗೆಲ್ಲಲು ತಮ್ಮ ಅಗತ್ಯವಿತ್ತು. ಬಳಿಕ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಪರಿಣಾಮ 2023ರಲ್ಲಿ ಯಾರೇ ಸ್ಪರ್ಧಿಸಿದರೂ ಗೆಲ್ಲಬಹುದು ಎಂಬ ವಾತಾವರಣ ನಿರ್ಮಾಣವಾಯಿತು ಎಂದು ಅಭಿಪ್ರಾಯಪಟ್ಟರು.
“ವಿಪಕ್ಷಗಳನ್ನೂ ಸ್ವಲ್ಪ ಗಟ್ಟಿಯಾಗಿ ಉಳಿಸಬೇಕಿತ್ತು. ಪಕ್ಷವನ್ನು ಬೆಳೆಸಿದ್ದು ತಪ್ಪಾಯಿತೇ?” ಎಂದು ಪ್ರಶ್ನಿಸಿದ ಅವರು, ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿಗೆ ಕರೆತರುವುದಕ್ಕೆ ತಾವು ಒಪ್ಪಿಗೆ ನೀಡಿದ್ದೆ, ಆದರೆ ತಾವೇ ಅವರನ್ನು ಪಕ್ಷಕ್ಕೆ ಕರೆತಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
2004ರಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮನ್ನು ಗೆಲ್ಲಿಸಿದ್ದರು. ವಿಜಯೋತ್ಸವ ಭಾಷಣದಲ್ಲಿ ಮುಂದಿನ ದಿನಗಳಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ಲಿಸಲು ಶ್ರಮಿಸುವುದಾಗಿ ಹೇಳಿದ್ದೆ. 2023ರ ಚುನಾವಣೆಯಲ್ಲಿಯೂ ಅದೇ ರೀತಿ ಕೆಲಸ ಮಾಡಿದ್ದೇನೆ ಎಂದು ರಘುಪತಿ ಭಟ್ ತಿಳಿಸಿದರು.
ತಮಗೆ ರಾಜ್ಯ ಕಾರ್ಯಕಾರಿಣಿ ಸದಸ್ಯತ್ವ, ಲೋಕಸಭೆ ಅಥವಾ ವಿಧಾನ ಪರಿಷತ್ ಸ್ಥಾನ ನೀಡಬಹುದಿತ್ತು. ಆದರೆ ಅಂತಹ ಅವಕಾಶಗಳು ದೊರೆಯದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾಯಿತು. ನಾಯಕರ ಮುಂದೆ ಕೈಕಾಲು ಹಿಡಿದು ಸ್ಥಾನಮಾನ ಪಡೆಯಲು ತಾನು ಸಿದ್ಧನಿಲ್ಲ ಎಂದರು.
2013ರಲ್ಲಿ ತಾವು ಹಾಲಿ ಶಾಸಕರಾಗಿದ್ದಾಗ ಸಿಡಿ ಪ್ರಕರಣದ ವಿಚಾರ ಮುಂದಿಟ್ಟುಕೊಂಡು ಅನಂತ್ ಕುಮಾರ್ ಕರೆ ಮಾಡಿ ಸ್ಪರ್ಧಿಸಬಾರದು ಎಂದು ತಿಳಿಸಿದ್ದರು. ಬಳಿಕ ಸುಧಾಕರ್ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದಾಗ ಅವರ ಪರವಾಗಿ ತಾವೇ ಕೆಲಸ ಮಾಡಿದ್ದೆ ಎಂದು ಹೇಳಿದರು. ಆದರೆ 2023ರಲ್ಲಿ ಕೊನೆಯ ಕ್ಷಣದವರೆಗೂ ತಾವೇ ಅಭ್ಯರ್ಥಿ ಎಂದುಕೊಂಡಿದ್ದೆ. ಟಿವಿಯಲ್ಲಿ ಅಭ್ಯರ್ಥಿಯ ಹೆಸರು ನೋಡಿದ ಬಳಿಕವೇ ಬೇರೆಯವರನ್ನು ಆಯ್ಕೆ ಮಾಡಿರುವುದು ತಿಳಿಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನನ್ನ ಶವದ ಮೇಲೆ ಬಿಜೆಪಿ ಧ್ವಜ ಇರಬೇಕು ಎಂದು ಹೇಳಿದ್ದು ನಿಜ. ಆಗ ನಾನು ಬಿಜೆಪಿಯಲ್ಲಿದ್ದು ಪಕ್ಷನಿಷ್ಠೆಯಿಂದ ಆ ಮಾತು ಹೇಳಿದ್ದೆ. ಬಿಜೆಪಿ ನನ್ನನ್ನು ವಾಪಸ್ ಕರೆದರೆ ಈಗಲೂ ಆ ಮಾತಿಗೆ ಬದ್ಧನಿದ್ದೇನೆ. ಆದರೆ ಈಗ ನಾನು ಬಿಜೆಪಿಯಲ್ಲಿಲ್ಲ” ಎಂದು ರಘುಪತಿ ಭಟ್ ಹೇಳಿದರು.
ಯತ್ನಾಳ್ ಮತ್ತು ಈಶ್ವರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತರುವ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಅವರ ಬಳಿಯೇ ವಿಚಾರಿಸಿದ್ದೇನೆ ಎಂದ ಅವರು, ಪ್ರತಾಪ್ ಸಿಂಹ ಮತ್ತು ಅನಂತ್ ಕುಮಾರ್ ಹೆಗಡೆ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಟಿಕೆಟ್ ತಪ್ಪಿಸಬಾರದಿತ್ತು ಎಂದು ಅಭಿಪ್ರಾಯಪಟ್ಟರು.













