ಪುತ್ತೂರು ಶಾಸಕ ಅಶೋಕ್ ರೈ ಕೆಆರ್ಡಿಎಲ್ ಅಧಿಕಾರಿಗಳ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪ: ತನಿಖೆಗೆ ಜಿಲ್ಲಾಧಿಕಾರಿಗೆ ಸಚಿವ ಖಾದರ್ ಸೂಚನೆ

Spread the love

ಪುತ್ತೂರು ಶಾಸಕ ಅಶೋಕ್ ರೈ ಕೆಆರ್ಡಿಎಲ್ ಅಧಿಕಾರಿಗಳ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪ: ತನಿಖೆಗೆ ಜಿಲ್ಲಾಧಿಕಾರಿಗೆ ಸಚಿವ ಖಾದರ್ ಸೂಚನೆ

ಮಂಗಳೂರು: ಪುತ್ತೂರು ಶಾಸಕ ಅಶೋಕ್ ರೈ ಅವರು ಕೆಆರ್ಡಿಎಲ್ ಅಧಿಕಾರಿಗಳ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕರು ಅಶೋಕ್ ರೈ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ, ಈ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಅಲ್ಲದೆ, ಅಶೋಕ್ ರೈ ಅವರ ಹೇಳಿಕೆಯನ್ನು ಈ ಹಿಂದೆ ಅನುಭವದ ಕೊರತೆಯಿಂದ ಮಾಡಿದ ಹೇಳಿಕೆ ಎಂದು ಬಣ್ಣಿಸಲಾಗಿತ್ತು. ಹಾಗಾದರೆ ಅವರ ಹೇಳಿಕೆಗೆ ಯಾವುದೇ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.

ಈ ವೇಳೆ ಬಿಜೆಪಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವ ಯು.ಟಿ. ಖಾದರ್, ಬಿಜೆಪಿ ಶಾಸಕರು ಈ ವಿಚಾರವನ್ನು ಸರಿಯಾದ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಆರೋಪಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದವರು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಯಾರೋ ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸದೆ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಸಚಿವರು ತಿಳಿಸಿದರು.

ಇದುವರೆಗೆ ಕೆಆರ್ಡಿಎಲ್ಗೆ ತಾವು ಯಾವುದೇ ನೇರ ಕಾಮಗಾರಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಖಾದರ್, ಶಾಸಕರ ಹೇಳಿಕೆ ತಪ್ಪೇ ಅಥವಾ ಅಧಿಕಾರಿಗಳ ಹೇಳಿಕೆ ತಪ್ಪೇ ಎಂಬುದರ ಕುರಿತು ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ ಎಂದರು.

ಅಶೋಕ್ ರೈ ಅವರ ಹೇಳಿಕೆಯ ಕುರಿತು ಉನ್ನತ ಮಟ್ಟದವರೆಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.


Spread the love
Subscribe
Notify of

0 Comments