ಮಂಗಳೂರಿನ ಹೆಚ್ಚುವರಿ ರೈಲ್ವೆ ಜಂಕ್ಷನ್ ಆಗಿ ಪಡೀಲ್ ಅಭಿವೃದ್ಧಿಪಡಿಸಿ: ಪಂಚಗಂಗಾ ಎಕ್ಸ್ಪ್ರೆಸ್ಗೆ ನಿಲುಗಡೆ ಕಲ್ಪಿಸಲು ಪಿ.ವಿ. ಮೋಹನ್ ಒತ್ತಾಯ
ಮಂಗಳೂರು: ಮಂಗಳೂರು ನಗರದ ಪಡೀಲ್ ರೈಲು ನಿಲ್ದಾಣವನ್ನು ಹೆಚ್ಚುವರಿ ಪ್ರಮುಖ ರೈಲ್ವೆ ಜಂಕ್ಷನ್ ಹಾಗೂ ಉಪ ಪ್ರಯಾಣಿಕರ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸುವುದರೊಂದಿಗೆ, ಕಾರವಾರ–ಬೆಂಗಳೂರು ಪಂಚಗಂಗಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಗೆ ಪಡೀಲ್ನಲ್ಲಿ ನಿಲುಗಡೆ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಆಗ್ರಹಿಸಿದ್ದಾರೆ.
ಈ ಸಂಬಂಧ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ಮಂಗಳೂರಿನ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಪ್ರಯಾಣಿಕರ ಸುರಕ್ಷತೆ ಹಾಗೂ ಪಡೀಲ್ ಸುತ್ತಮುತ್ತಲಿನ ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸಲು ವೈಯಕ್ತಿಕವಾಗಿ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.
ಮಂಗಳೂರು ನಗರಕ್ಕೆ ರೈಲು ಸಂಪರ್ಕ ಆರಂಭವಾಗಿ ಸುಮಾರು 120 ವರ್ಷಗಳಾಗಿದ್ದು, ದಕ್ಷಿಣ ಭಾರತದ ಪ್ರಮುಖ ರೈಲ್ವೆ ಸಂಪರ್ಕ ಕೇಂದ್ರಗಳಲ್ಲಿ ಒಂದಾಗಿದೆ. ಕರಾವಳಿ ಕರ್ನಾಟಕವನ್ನು ಬೆಂಗಳೂರು, ಕೇರಳ, ಗೋವಾ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುವಲ್ಲಿ ಮಂಗಳೂರು ಮಹತ್ವದ ಪಾತ್ರ ವಹಿಸುತ್ತಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳು ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆ, ನಗರ ವಿಸ್ತರಣೆ, ವಾಣಿಜ್ಯ ಚಟುವಟಿಕೆಗಳು ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿದಾಗ ವಿಕೇಂದ್ರೀಕೃತ ರೈಲ್ವೆ ಮೂಲಸೌಕರ್ಯದ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಕಾರ್ಯತಂತ್ರದ ದೃಷ್ಟಿಯಿಂದ ಪಡೀಲ್ ರೈಲು ನಿಲ್ದಾಣವನ್ನು ಮತ್ತೊಂದು ಪ್ರಮುಖ ರೈಲ್ವೆ ಜಂಕ್ಷನ್ ಹಾಗೂ ಉಪ ಪ್ರಯಾಣಿಕರ ಟರ್ಮಿನಲ್ ಆಗಿ ರೂಪಿಸಲು ಉತ್ತಮ ಅವಕಾಶವಿದೆ. ಮೈಸೂರು–ಹಾಸನ ಭಾಗದತ್ತ ಹೊಂದಿರುವ ರೈಲು ಸಂಪರ್ಕವನ್ನು ಬಳಸಿಕೊಂಡು ಪ್ರಯಾಣಿಕರ ಸಂಚಾರ ಮತ್ತು ರೈಲ್ವೆ ಕಾರ್ಯಾಚರಣೆಗಳಿಗೆ ಪೂರಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬಹುದು. ಇದರಿಂದ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಮೇಲಿನ ಪ್ರಯಾಣಿಕರ ಒತ್ತಡ ಕಡಿಮೆಯಾಗುವುದರ ಜತೆಗೆ ನಗರದ ಪೂರ್ವ ಮತ್ತು ದಕ್ಷಿಣ ಭಾಗದ ಜನರಿಗೆ ಉತ್ತಮ ರೈಲು ಸಂಪರ್ಕ ದೊರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಂಚಗಂಗಾ ಎಕ್ಸ್ಪ್ರೆಸ್ಗೆ ನಿಲುಗಡೆಗೆ ಆಗ್ರಹ
ಕಾರವಾರ–ಬೆಂಗಳೂರು ರೈಲು ಸಂಖ್ಯೆ 16596 ಪಂಚಗಂಗಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಗೆ ಪಡೀಲ್ನಲ್ಲಿ ತಕ್ಷಣ ನಿಲುಗಡೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ. ಈ ರೈಲು ಪಡೀಲ್ ಮೂಲಕ ಹಾದುಹೋಗುತ್ತಿದ್ದರೂ ನಿಲುಗಡೆ ಇಲ್ಲ. ಪ್ರಸ್ತುತ ಸುರತ್ಕಲ್ನಲ್ಲಿ ನಿಲುಗಡೆ ಹೊಂದಿರುವ ರೈಲು, ಮಂಗಳೂರು ನಗರ ಪ್ರದೇಶದ ಮೂಲಕ ಯಾವುದೇ ಪ್ರಯಾಣಿಕರ ನಿಲುಗಡೆಯಿಲ್ಲದೆ ಸಂಚರಿಸಿ ಮುಂದಿನ ನಿಲುಗಡೆಯನ್ನು ಬಂಟ್ವಾಳದಲ್ಲಿ ಹೊಂದಿದೆ.
ಪಡೀಲ್ನಲ್ಲಿ ನಿಲುಗಡೆ ಕಲ್ಪಿಸಿದರೆ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ನಿವಾಸಿಗಳು, ನಿತ್ಯ ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ದೂರದ ರೈಲು ನಿಲ್ದಾಣಗಳಿಗೆ ತೆರಳುವ ಅನಿವಾರ್ಯತೆಯೂ ತಪ್ಪಲಿದೆ. ಈಗಿರುವ ರೈಲ್ವೆ ಮೂಲಸೌಕರ್ಯ ಮತ್ತು ಈ ನಿಲ್ದಾಣವನ್ನು ಅವಲಂಬಿಸಿರುವ ಜನಸಂಖ್ಯೆಯನ್ನು ಪರಿಗಣಿಸಿ ಈ ಬೇಡಿಕೆಯನ್ನು ಪರಿಶೀಲಿಸಿ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
1,400ಕ್ಕೂ ಹೆಚ್ಚು ಕುಟುಂಬಗಳಿಗೆ ಸುರಕ್ಷಿತ ಸಂಪರ್ಕದ ಅಗತ್ಯ
ಪಡೀಲ್ ರೈಲು ನಿಲ್ದಾಣದ ಸುತ್ತಮುತ್ತ 1,400ಕ್ಕೂ ಹೆಚ್ಚು ವಸತಿ ಕುಟುಂಬಗಳಿದ್ದು, ಸಮರ್ಪಕ ರಸ್ತೆ ಸಂಪರ್ಕ ಮತ್ತು ಸುರಕ್ಷಿತ ಪಾದಚಾರಿ ದಾಟುವ ವ್ಯವಸ್ಥೆಯ ಕೊರತೆಯಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ರೈಲು ಹಳಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಅನಿವಾರ್ಯವಾಗಿ ಹಳಿಯನ್ನು ದಾಟಬೇಕಾದ ಪರಿಸ್ಥಿತಿ ಇದೆ. ಇದರಿಂದ ಶಾಲಾ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಗರ್ಭಿಣಿಯರು ಅಪಾಯ ಎದುರಿಸುವಂತಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರೈಲು ಹಳಿಯನ್ನು ಸುರಕ್ಷಿತವಾಗಿ ದಾಟಲು ಪಾದಚಾರಿ ಮೇಲ್ಸೇತುವೆ ಅಥವಾ ರೈಲ್ವೆ ಕೆಳಸೇತುವೆ ನಿರ್ಮಿಸಬೇಕು. ಉತ್ತಮ ಪ್ಲಾಟ್ಫಾರ್ಮ್ಗಳು, ಪ್ರಯಾಣಿಕರ ತಂಗುದಾಣ, ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಆಸನ ವ್ಯವಸ್ಥೆ, ಸುಗಮ ರಸ್ತೆ ಸಂಪರ್ಕ, ಪ್ರವೇಶ ಮಾರ್ಗಗಳು ಹಾಗೂ ವಾಹನ ನಿಲುಗಡೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೈಸೂರು ವಿಭಾಗದ ವ್ಯಾಪ್ತಿಗೆ ಬಂದಿರುವುದು ಅಭಿವೃದ್ಧಿಗೆ ಅವಕಾಶ
ಇತ್ತೀಚಿನ ರೈಲ್ವೆ ವಿಭಾಗೀಯ ಪುನರ್ವ್ಯವಸ್ಥೆಯ ಹಿನ್ನೆಲೆಯಲ್ಲಿ ಈ ಹಿಂದೆ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಪಡೀಲ್ ರೈಲು ನಿಲ್ದಾಣ ಇದೀಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬಂದಿದೆ. ಈ ಬದಲಾವಣೆಯು ಬೆಂಗಳೂರು–ಹಾಸನ–ಮಂಗಳೂರು ರೈಲ್ವೆ ಮಾರ್ಗದೊಂದಿಗೆ ಪಡೀಲ್ ಅನ್ನು ಪರಿಣಾಮಕಾರಿಯಾಗಿ ಸಂಯೋಜಿಸಲು ಹಾಗೂ ಈ ಭಾಗದ ಬಹುಕಾಲದ ಬೇಡಿಕೆಗಳಿಗೆ ಆದ್ಯತೆ ನೀಡಲು ಅವಕಾಶ ಕಲ್ಪಿಸಿದೆ ಎಂದು ಪಿ.ವಿ. ಮೋಹನ್ ತಿಳಿಸಿದ್ದಾರೆ.
ಈ ಬೇಡಿಕೆಗಳಿಗೆ ಸ್ಥಳೀಯ ಲೋಕಸಭಾ ಸದಸ್ಯರು, ಶಾಸಕರು ಹಾಗೂ ನಾಗರಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಭೂಮಿ ಮತ್ತು ಇತರ ಸೌಲಭ್ಯಗಳ ವಿಚಾರದಲ್ಲಿ ಕರ್ನಾಟಕ ಸರ್ಕಾರವೂ ಸಹಕಾರ ನೀಡಲು ಸಿದ್ಧವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪಡೀಲ್ ಅನ್ನು ಮಂಗಳೂರಿನ ಹೆಚ್ಚುವರಿ ಪ್ರಮುಖ ರೈಲ್ವೆ ಜಂಕ್ಷನ್ ಹಾಗೂ ಉಪ ಪ್ರಯಾಣಿಕರ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸಲು ಸಮಗ್ರ ಕಾರ್ಯಸಾಧ್ಯತಾ ಅಧ್ಯಯನ ನಡೆಸಿ ಯೋಜನೆ ರೂಪಿಸಬೇಕು. ಪಂಚಗಂಗಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಗೆ ನಿಲುಗಡೆ ಕಲ್ಪಿಸಬೇಕು. ಪಾದಚಾರಿ ಮೇಲ್ಸೇತುವೆ ಅಥವಾ ರೈಲ್ವೆ ಕೆಳಸೇತುವೆ ಸೇರಿದಂತೆ ಸುರಕ್ಷತಾ ಸೌಲಭ್ಯಗಳಿಗೆ ಮಂಜೂರಾತಿ ನೀಡಬೇಕು. ಅಗತ್ಯ ಪ್ಲಾಟ್ಫಾರ್ಮ್ಗಳು ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಬೇಕು. ಈ ಪ್ರಸ್ತಾವನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಭೆ ಕರೆಯಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪಡೀಲ್ ಮತ್ತು ಸುತ್ತಮುತ್ತಲಿನ ಜನರ ಬೇಡಿಕೆ ಕೇವಲ ಹೆಚ್ಚುವರಿ ರೈಲು ನಿಲುಗಡೆಗೆ ಸೀಮಿತವಾಗಿಲ್ಲ. ಉತ್ತಮ ರೈಲು ಸಂಪರ್ಕ, ಪ್ರಯಾಣಿಕರ ಸುರಕ್ಷತೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುವುದೇ ಅವರ ಆಶಯವಾಗಿದೆ. ಪಡೀಲ್ ರೈಲು ನಿಲ್ದಾಣದ ಸಮಗ್ರ ಅಭಿವೃದ್ಧಿಯಿಂದ ಕರಾವಳಿ ಕರ್ನಾಟಕದ ರೈಲ್ವೆ ಜಾಲ ಬಲಗೊಳ್ಳುವುದರ ಜತೆಗೆ ಆರ್ಥಿಕ ಚಟುವಟಿಕೆ, ಉದ್ಯೋಗಾವಕಾಶ ಮತ್ತು ಪ್ರಾದೇಶಿಕ ಅಭಿವೃದ್ಧಿಗೂ ಉತ್ತೇಜನ ದೊರೆಯಲಿದೆ ಎಂದು ಪಿ.ವಿ. ಮೋಹನ್ ಮನವಿಯಲ್ಲಿ ತಿಳಿಸಿದ್ದಾರೆ.













