ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ ಎಂಬ ಸುಳ್ಳು ವದಂತಿಗಳಿಗೆ ಕಿವಿ ಕೊಡದಿರಿ : ರಮೇಶ್ ಕಾಂಚನ್

Spread the love

ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ ಎಂಬ ಸುಳ್ಳು ವದಂತಿಗಳಿಗೆ ಕಿವಿ ಕೊಡದಿರಿ : ರಮೇಶ್ ಕಾಂಚನ್

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆಯ ಅವಧಿಯನ್ನು ಅಕ್ಟೋಬರ್ 31 ರ ವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.

ಅವರು ಇಂದು ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ತಾಲೂಕು ಪಂಚಾಯತ್ನ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಗೃಹಜ್ಯೋತಿ ಯೋಜನೆ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆಯ ಅವಧಿಯಲ್ಲಿ ಫಲಾನುಭವಿಗಳು ಮನೆಗಳಿಗೆ ಬೀಗ ಹಾಕಿರುವುದು, ಪರಿಶೀಲನಾ ಸಮಯದಲ್ಲಿ ಫಲಾನುಭವಿಗಳು ಲಭ್ಯವಿಲ್ಲದೇ ಇರುವುದು, ಸೇರಿದಂತೆ ಮತ್ತಿತರ ಕಾರಣಗಳಿಂದ ಮರುಪರಿಶೀಲನಾ ಪ್ರಕ್ರಿಯೆ ನಿಗಧಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಇರುವುದರಿಂದ ಸದರಿ ಪ್ರಕ್ರಿಯೆಯನ್ನು ಅ. 31 ರ ವರೆಗೆ ವಿಸ್ತರಿಸಲಾಗಿರುತ್ತದೆ. ಮೆಸ್ಕಾಂ ಸಿಬ್ಬಂದಿಗಳು ಮೂರು ಬಾರಿ ಮನೆ ಭೇಟಿ ನೀಡಿದಾಗಲು ಫಲಾನುಭವಿಗಳು ಲಭ್ಯವಿಲ್ಲದಿದ್ದಲ್ಲಿ, ಫಲಾನುಭವಿಗಳು ಸಂಬಂಧಪಟ್ಟ ಮೆಸ್ಕಾಂ ಕಚೇರಿಗೆ ತೆರಳಿ ಮಾಹಿತಿಯನ್ನು ನೀಡಬಹುದಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ, ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿ, ಸೇರಿದಂತೆ ಮತ್ತಿತರ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾರ್ವಜನಿಕರು ಈ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಗ್ಯಾರಂಟಿ ಯೋಜನೆಗಳು ಈ ಹಿಂದಿನಂತೆಯೇ ಮುಂದುವರೆಯಲಿದೆ ಎಂದ ಅವರು, ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಮೃತಪಟ್ಟ ಪ್ರಕರಣಗಳ ಪರಿಶೀಲನಾ ಕಾರ್ಯ ಮಾತ್ರ ನಡೆಯುತ್ತಿದ್ದು, ಇದಕ್ಕೆ ಕುಟುಂಬಸ್ಥರು ಅಗತ್ಯ ಸಹಕಾರ ನೀಡಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗುವ ಮಾಸಿಕ ಸಹಾಯಧನದ ಹಣವನ್ನು ಹಿಂದಿನ ಸಾಲದ ಕಂತು ಅಥವಾ ಬಡ್ಡಿಯ ನೆಪದಲ್ಲಿ ಬ್ಯಾಂಕುಗಳು ನೇರವಾಗಿ ಕಡಿತಗೊಳಿಸುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ ನೀಡಲಾಗುತ್ತಿರುವ 2000 ರೂ. ಗಳ ಆರ್ಥಿಕ ಸಹಾಯಧನ ಐದು- ಆರು ತಿಂಗಳಿನಿಂದ ಪಾವತಿಯಾಗುತ್ತಿಲ್ಲ ಎಂದು ಫಲಾನುಭವಿ ಮಹಿಳೆಯರಿಂದ ದೂರುಗಳು ಕೇಳಿ ಬರುತ್ತಿವೆ. ಹಣ ಜಮೆಯಾದ ಬಗ್ಗೆ ಬ್ಯಾಂಕುಗಳಿಂದ ಸಂದೇಶ ಬಾರದ ಹಿನ್ನೆಲೆ, ಈ ರೀತಿಯ ಗೊಂದಲಗಳು ಉಂಟಾಗುತ್ತಿವೆ. ಫಲಾನುಭವಿಗಳು ಆಗಿಂದಾಗ್ಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪರಿಶೀಲಿಸಿ, ಹಣ ಪಾವತಿ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದ ಅವರು, ಅರ್ಹ ಫಲಾನುಭವಿಗಳ ಖಾತೆಗೆ ಯೋಜನೆಯ ಹಣ ಜಮೆಯಾಗುವ ಸಂದರ್ಭದಲ್ಲಿ ಮೊಬೈಲ್ಗಳಿಗೆ ಸಂದೇಶ ರವಾನಿಸುವ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿ ಯನ್ನು ತಪ್ಪದೇ ಮಾಡಿಸಬೇಕು. ಈಗಾಗಲೇ ಉಡುಪಿ ತಾಲೂಕಿನಲ್ಲಿ ಶೇ. 81 ರಷ್ಟು ಇ-ಕೆವೈಸಿ ಕಾರ್ಯ ಪೂರ್ಣಗೊಂಡಿದ್ದು, ಅಕ್ಟೋಬರ್ 20 ರ ಒಳಗಾಗಿ ಬಾಕಿ ಉಳಿದಿರುವ ಇ-ಕೆವೈಸಿ ಕಾರ್ಯ ಪೂರ್ಣಗೊಳ್ಳಬೇಕು. ನಾಗರಿಕರು ಅನ್ನಸೇವೆ ಆಪ್ ಮೂಲಕವೂ ಸ್ವಯಂ ಆಗಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ ಎಂದ ಅವರು, ಯೋಜನೆಯಡಿ ಪಡಿತರ ವಿತರಣಾ ಕೇಂದ್ರಗಳಿಗೆ ಸಮಿತಿಯ ಸದಸ್ಯರುಗಳು ಆಗಾಗ್ಗೆ ಭೇಟಿ ನೀಡಿ, ಅಲ್ಲಿ ಯಾವುದೇ ಕುಂದುಕೊರತೆಗಳು ಕಂಡುಬAದಲ್ಲಿ ಸಭೆಯ ಗಮನಕ್ಕೆ ತರಬೇಕು ಎಂದರು.

ಶಕ್ತಿ ಯೋಜನೆಯಡಿ ಕೊರೋನಾ ನಂತರ ಸ್ಥಗಿತಗೊಂಡಿದ್ದ ಕೆಲವು ರೂಟ್ಗಳ ಬಸ್ಗಳು ಇಂದಿಗೂ ಸಂಚರಿಸುತ್ತಿಲ್ಲ. ಪ್ರತೀ ಸಭೆಗಳಲ್ಲಿಯೂ ಬಡಗುಬೆಟ್ಟುವಿಗೆ ನಿಗಮದ ಬಸ್ನ ಸಂಚಾರ ಕಲ್ಪಿಸುವಂತೆ ಸಮಿತಿಯ ಸದಸ್ಯರು ಒತ್ತಾಯಿಸುತ್ತಿದ್ದರೂ ಸಹ ಇದು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಶೀಘ್ರವಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಪದವಿ ಪೂರೈಸಿದ ಯುವಜನರಿಗೆ ಉದ್ಯೋಗ ದೊರಕುವವರೆಗೆ ಆರ್ಥಿಕ ಸಹಾಯಧನ ನೀಡಲು ರೂಪಿಸಿರುವ ಯುವನಿಧಿ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಏರ್ಪಡಿಸಬೇಕು. ಯೋಜನೆಯಡಿ ನೋಂದಣಿ ಕಾರ್ಯಕ್ರಮಗಳು ನಡೆಯುವ ಬಗ್ಗೆ ಯುವಜನರಲ್ಲಿ ಹೆಚ್ಚಿನ ಪ್ರಚಾರ ಮೂಡಿಸಬೇಕು ಎಂದ ಅವರು, ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಈ ಯೋಜನೆಯ ಬಗ್ಗೆ ಸಮಸ್ಯೆಗಳು ಬಂದಾಗ ಆದಷ್ಟು ತಮ್ಮ ಹಂತದಲ್ಲಿಯೇ ಬಗೆಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಾರ್ವಜನಿಕರಲ್ಲಿ ಇವುಗಳ ಬಗ್ಗೆ ಅರಿವು ಮೂಡಿಸಿ, ಅರ್ಹ ಫಲಾನುಭವಿಗಳು ಯೋಜನೆಗಳಿಂದ ಹೊರಗುಳಿಯದಂತೆದAತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಸೇವಕರಿದ್ದಂತೆ. ಎಷ್ಟೇ ಒತ್ತಡದಲ್ಲಿರೂ ಸಹ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಾಲೂಕು ಪಂಚಾಯತ್ನ ಸಹಾಯಕ ನಿರ್ದೇಶಕಿ ಫರ್ಜಾನಾ ಎಮ್, ಸಮಿತಿಯ ಸದಸ್ಯರುಗಳು, ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments