ದಸರಾ ರಜೆ ವಿಸ್ತರಣೆ: ಶಾಲೆಗಳಿಗೆ ಅ.22 ರಂದು ರಜೆ

Spread the love

ದಸರಾ ರಜೆ ವಿಸ್ತರಣೆ: ಶಾಲೆಗಳಿಗೆ ಅ.22 ರಂದು ರಜೆ

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (1 ರಿಂದ 10ನೇ ತರಗತಿ ವರೆಗೆ ) ದಸರಾ ರಜೆ ವಿಸ್ತರಿಸಲಾಗಿದೆ, ಅಕ್ಟೋಬರ್ 22 ರಂದು ರಜೆ ಘೋಷಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅದೇಶಿಸಿದ್ದಾರೆ.

ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವದ ಪೂಜೆ ಹಾಗೂ ಮೆರವಣಿಗೆಯ ಅಂತಿಮ ದಿನವಾದ ಅಕ್ಟೋಬರ್ 21ರಂದು ರಾತ್ರಿ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಮಕ್ಕಳ ಮತ್ತು ಪೋಷಕರ ಮನವಿಯ ಮೇರೆಗೆ ದಸರಾ ರಜೆಯನ್ನು ಅಕ್ಟೋಬರ್ 22ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ದಸರಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಪೋಷಕರು ಭಾಗವಹಿಸಲಿದ್ದು, ದೂರದ ಜಿಲ್ಲೆಗಳಿಂದ ಆಗಮಿಸುವವರು ಮನೆ ತಲುಪಲು ತಡವಾಗುವ ಸಾಧ್ಯತೆಯಿದೆ. ಅಕ್ಟೋಬರ್ 22ರಂದು ಶಾಲೆಗಳು ಪುನರಾರಂಭಗೊಳ್ಳುವುದರಿಂದ ಮಕ್ಕಳಿಗೆ ಶಾಲೆಗೆ ಹಾಜರಾಗಲು ತೊಂದರೆಯಾಗಬಹುದು ಎಂದು ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ದೂರವಾಣಿ ಮೂಲಕ ರಜೆಯನ್ನು ಒಂದು ದಿನ ವಿಸ್ತರಿಸುವಂತೆ ಮನವಿ ಮಾಡಿದ್ದರು.

ಈ ಮನವಿಯನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಾಲೋಚಿಸಿದ ಬಳಿಕ, ಈಗಾಗಲೇ ಅಕ್ಟೋಬರ್ 3ರಿಂದ 21ರವರೆಗೆ ಘೋಷಿಸಲಾಗಿದ್ದ ದಸರಾ ರಜೆಯನ್ನು ಅಕ್ಟೋಬರ್ 22ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ಹೆಚ್ಚುವರಿಯಾಗಿ ಘೋಷಿಸಲಾದ ಒಂದು ದಿನದ ರಜೆಯಿಂದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸರಿದೂಗಿಸಲು ಸೂಚಿಸಲಾಗಿದೆ. ಅದರಂತೆ, ಶಾಲೆಗಳಲ್ಲಿ ಮುಖ್ಯಶಿಕ್ಷಕರ ವಿವೇಚನೆಯಡಿ ನೀಡಲಾಗುವ ನಾಲ್ಕು ಸ್ಥಳೀಯ ರಜೆಗಳ ಪೈಕಿ ಒಂದು ರಜೆಯನ್ನು ಬಳಸಿಕೊಂಡು ಹೆಚ್ಚುವರಿ ದಸರಾ ರಜೆಯನ್ನು ಸರಿದೂಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.


Spread the love
Subscribe
Notify of

0 Comments