ಹಣಕಾಸು ವ್ಯವಹಾರ: ಮಲ್ಪೆ ಬಂದರು ದಕ್ಕೆಯಲ್ಲಿ ಹಲ್ಲೆ ಪ್ರಕರಣ: ಎರಡು ಪ್ರತ್ಯೇಕ ಪ್ರಕರಣ ದಾಖಲು

Spread the love

ಹಣಕಾಸು ವ್ಯವಹಾರ: ಮಲ್ಪೆ ಬಂದರು ದಕ್ಕೆಯಲ್ಲಿ ಹಲ್ಲೆ ಪ್ರಕರಣ: ಎರಡು ಪ್ರತ್ಯೇಕ ಪ್ರಕರಣ ದಾಖಲು

ಉಡುಪಿ: ಮೀನುಗಾರಿಕಾ ವ್ಯವಹಾರ ಸಂಬಂಧ ಹಣಕಾಸು ವಿವಾದದ ಹಿನ್ನೆಲೆ ಮಲ್ಪೆ ಬಂದರಿನ ದಕ್ಕೆಯಲ್ಲಿ ಹಲ್ಲೆ ಪ್ರಕರಣ ನಡೆದಿದ್ದು, ಪರಸ್ಪರ ದೂರುಗಳ ಆಧಾರದಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪೊಲೀಸ್ ಮಾಹಿತಿಯಂತೆ, ಜಯೇಶ್ ಕೋಟ್ಯಾನ್ ಮತ್ತು ಹರೀಶ್ ಇಬ್ಬರೂ ಮೀನುಗಾರಿಕಾ ವ್ಯವಹಾರ ನಡೆಸುತ್ತಿದ್ದು, ಹಣಕಾಸು ಬಾಕಿ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಏಪ್ರಿಲ್ 30 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ ಕೊಡವೂರು ಗ್ರಾಮದ ಮಲ್ಪೆ ಬಂದರಿನ ದಕ್ಕೆಯಲ್ಲಿ ಹರೀಶ್ ಇದ್ದ ವೇಳೆ, ಜಯೇಶ್ ಕೋಟ್ಯಾನ್ ಅವರ ತಾಯಿ ಭಾರತಿ ಕೋಟ್ಯಾನ್, ಉದಯ ಪೂಜಾರಿ (ಕೋರಿ ಉದಯ), ಶೇಕು ಕಟಪಾಡಿ ಹಾಗೂ ಪರುಶೋತ್ತಮ ಅವರು ಕಾರಿನಲ್ಲಿ ಆಗಮಿಸಿ ಹರೀಶ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆ ಸಂದರ್ಭದಲ್ಲಿ ಜಯೇಶ್ ಕೋಟ್ಯಾನ್ ಅವರು ಹರೀಶ್ ಅವರನ್ನು ನೆಲಕ್ಕೆ ದೂಡಿ, ಎದೆ ಹಾಗೂ ಮರ್ಮಾಂಗಕ್ಕೆ ಕಾಲಿನಿಂದ ತುಳಿದಿದ್ದು, ಚಾಕು ಹಿಡಿದು ದಾಳಿ ಮಾಡಲು ಯತ್ನಿಸಿದರೆಂದು ಹೇಳಲಾಗಿದೆ. ಹರೀಶ್ ಅಲ್ಲಿಂದ ತಪ್ಪಿಸಿಕೊಂಡು ಬಳಿಕ ಸ್ಥಳೀಯರ ಸಹಾಯದಿಂದ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಲ್ಲೆಯ ವಿಡಿಯೋವನ್ನು ಕೆಲವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಹರೀಶ್ ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ಘಟನೆಗೆ ಸಂಬಂಧಿಸಿ ಜಯೇಶ್ ಕೋಟ್ಯಾನ್ ಅವರ ತಾಯಿ ಭಾರತಿ ಕೋಟ್ಯಾನ್ ಅವರು ಹರೀಶ್ ವಿರುದ್ಧ ಪ್ರತ್ಯೇಕ ದೂರು ನೀಡಿದ್ದು, ಮಲ್ಪೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

ಈ ಎರಡೂ ಪ್ರಕರಣಗಳು ಪ್ರಸ್ತುತ ತನಿಖೆಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments